ಬೆಂಗಳೂರು: ‘ಹೈದರಾಬಾದ್ನಲ್ಲಿ ಮೈಸೂರು ಸ್ಯಾಂಡಲ್ ನಕಲಿ ಸೋಪು ತಯಾರಿಕೆ ಘಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ನಡೆಸುತ್ತಿದ್ದ ರಾಕೇಶ್ ಜೈನ್ ಹಾಗೂ ಮಹಾವೀರ್ ಜೈನ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವರಿಬ್ಬರೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಈ ಇಬ್ಬರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ತೆಲಂಗಾಣ ಬಿಜೆಪಿ ನಾಯಕ ರಾಜಾಸಿಂಗ್ ಒಡನಾಡಿಗಳು. ಇಷ್ಟೆಲ್ಲ ಒಡನಾಟ ಇಟ್ಟುಕೊಂಡಿರುವವರ ಜತೆ ರಾಜ್ಯ ಬಿಜೆಪಿ ನಾಯಕರು ಸಂಪರ್ಕ ಹೊಂದಿರುವುದಿಲ್ಲವೇ’ ಎಂದು ಪ್ರಶ್ನಿಸಿದರು.
‘ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರಿಗೆ ಅನಾಮಿಕನೊಬ್ಬ ಕರೆ ಮಾಡಿ, ಮೈಸೂರು ಸ್ಯಾಂಡಲ್ ಹೆಸರಲ್ಲಿ ನಕಲಿ ಸೋಪುಗಳ ಮಾರಾಟದ ಬಗ್ಗೆ ಮಾಹಿತಿ ನೀಡಿದ್ದನು. ಅದನ್ನು ಆಧರಿಸಿ ಮೈಸೂರು ಸ್ಯಾಂಡಲ್ ಕಾರ್ಖಾನೆಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಪ್ರಕರಣದಲ್ಲಿ ರಾಕೇಶ್ ಜೈನ್, ಮಹಾವೀರ್ ಜೈನ್ ವಿರುದ್ಧ ಎಫ್ಐಆರ್ ದಾಖಲಾಗಿದೆ’ ಎಂದರು.
‘ಚಿತ್ತಾಪುರದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಹಾಗೂ ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ ಪುತ್ರ ವಿಠಲ್ ನಾಯಕ್ ಜೊತೆ ಆರೋಪಿಗಳಿಗೆ ಸಂಪರ್ಕವಿದೆ. ಬಿಜೆಪಿಯವರು ಹಣ ಮಾಡಲು ಯಾವುದಕ್ಕೂ ಹೇಸುವುದಿಲ್ಲ’ ಎಂದ ಪ್ರಿಯಾಂಕ್, ಯೋಗಿ ಆದಿತ್ಯನಾಥ ಜೊತೆಗಿರುವ ಫೋಟೋ ಪ್ರದರ್ಶಿಸಿದರು.
ಗರೀಬ್ ಕಲ್ಯಾಣ್ ಅಕ್ಕಿ: ‘ಗರೀಬ್ ಕಲ್ಯಾಣ್ ಯೋಜನೆಯ 700 ಕ್ವಿಂಟಲ್ ಅಕ್ಕಿ ಬಿಜೆಪಿ ನಾಯಕರ ಗೋದಾಮಿನಲ್ಲಿ ಇತ್ತೀಚೆಗೆ ಸಿಕ್ಕಿದೆ. ಮೋದಿ ಅಕ್ಕಿ ಎಂದು ಬೀಗುವ ಬಿಜೆಪಿ ನಾಯಕರು ಅದನ್ನು ಕದ್ದು ಸಿಕ್ಕಿಬಿದ್ದವರನ್ನು ತಮ್ಮ ಪಕ್ಷದಲ್ಲಿ ಯಾಕೆ ಇಟ್ಟುಕೊಂಡಿದ್ದಾರೆ? ಬಿಜೆಪಿ ನಾಯಕರಿಗೆ ಮಣಿಕಂಠ, ಪೃಥ್ವಿ ಸಿಂಗ್, ಸ್ಯಾಂಟ್ರೊ ರವಿ ಮೇಲೆ ಕ್ರಮ ಕೈಗೊಳ್ಳುವ ತಾಕತ್ತು ಬಿಜೆಪಿಯವರಿಗಿಲ್ಲ. ಕಾರಣ ಅವರ ಗುಟ್ಟುಗಳೆಲ್ಲಾ ಇವರ ಬಳಿಯೇ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.