ADVERTISEMENT

ಮಳವಳ್ಳಿಯಲ್ಲಿ ಮಲೆನಾಡುನಿರ್ಮಿಸಿದ ನಾಗರಾಜು

5ಸಾವಿರ ಮರ ಬೆಳೆಸಿದ ಪರಿಸರ ಪ್ರೇಮಿ

ಎಂ.ಎನ್.ಯೋಗೇಶ್‌
Published 4 ಜೂನ್ 2019, 19:19 IST
Last Updated 4 ಜೂನ್ 2019, 19:19 IST
ಕೋರ್ಟ್‌ ರಸ್ತೆ ಬದಿ ತಾವು ಬೆಳೆಸಿರುವ ಕಾಡುಬಾಗೆ ತೋಪಿನಲ್ಲಿ ನಡೆದು ಬರುತ್ತಿರುವ ನಾಗರಾಜು
ಕೋರ್ಟ್‌ ರಸ್ತೆ ಬದಿ ತಾವು ಬೆಳೆಸಿರುವ ಕಾಡುಬಾಗೆ ತೋಪಿನಲ್ಲಿ ನಡೆದು ಬರುತ್ತಿರುವ ನಾಗರಾಜು   

ಮಂಡ್ಯ: ಮಳವಳ್ಳಿಯ ಕೋರ್ಟ್‌, ಕ್ರೀಡಾಂಗಣ, ಸರ್ಕಾರಿ ಐಟಿಐ, ಅರಣ್ಯ ಇಲಾಖೆ ಕಚೇರಿ, ಅಂಬೇಡ್ಕರ್‌ ಭವನದ ಆವರಣದಲ್ಲಿ ಮಲೆನಾಡಿನ ವಾತಾವರಣವೇ ಸೃಷ್ಟಿಯಾಗಿದೆ.

ಇದಕ್ಕೆ ಕಾರಣ ಪರಿಸರ ಪ್ರೇಮಿ ಸಿ.ನಾಗರಾಜು. ಕಳೆದ 25 ವರ್ಷಗಳಿಂದ ನೂರಾರು ಸಸಿ ನೆಟ್ಟು, ಬೆಳೆಸಿರುವ ಅವರು ಪ್ರತಿ ಮರದ ರೆಂಬೆ, ಕೊಂಬೆಗಳ ಮೇಲೆ ಜೀವ ಇಟ್ಟುಕೊಂಡಿದ್ದಾರೆ.

ಸಾಲುಮರದ ತಿಮ್ಮಕ್ಕ ಅವರಿಂದ ಪ್ರೇರಣೆ ಪಡೆದು 8ನೇ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ಸಸಿಗಳ ಜೊತೆ ಗೆಳೆತನ ಬೆಳೆಸಿಕೊಂಡರು. ಮುಳ್ಳು ಗಿಡ ಬೆಳೆಯುತ್ತಿದ್ದ ಜಾಗದಲ್ಲಿ ಸಸ್ಯಕಾಶಿಯನ್ನೇ ರೂಪಿಸಿದರು. ಕೋರ್ಟ್‌ ಆವರಣದಲ್ಲಿ ಹಲಸು, ಮಾವಿನ ಮರಗಳಿವೆ, ಕ್ರೀಡಾಂಗಣದ ಸುತ್ತಲೂ ಹೊಂಗೆ, ಬೇವು, ತೇಗ, ಮಹಾಗನಿ ಮರಗಳ ಕಾಂಪೌಂಡ್‌ ನಿರ್ಮಾಣಗೊಂಡಿದೆ. ಐಟಿಐ ವಸತಿ ಗೃಹಗಳು, ಹಾಸ್ಟೆಲ್‌ ಸುತ್ತಮುತ್ತ ಹಲವು ಜಾತಿಯ ಮರಗಳು ಬೆಳೆ ನಿಂತಿವೆ.

ADVERTISEMENT

ಮೂರು ಸಾವಿರಕ್ಕೂ ಹೆಚ್ಚು ಮರಗಳಿವೆ. ನವಿಲುಗಳ ನರ್ತನ ನೋಡಲು, ಕೋಗಿಲೆಗಳ ನಿನಾದ ಕೇಳಲು ಜನ ಅಲ್ಲಿಗೆ ಬರುತ್ತಾರೆ. ಕೋರ್ಟ್‌ನ ಸಂಧಾನ ಕೇಂದ್ರ ಿವರು ಬೆಳೆಸಿರುವ ಮರದ ಕೆಳಗೆ ನಡೆಯುತ್ತದೆ. ವಿದ್ಯಾರ್ಥಿಗಳು ಪಾಠ ಕೇಳುತ್ತಾರೆ. ಯೋಗ ತರಗತಿ ನಡೆಯುತ್ತವೆ. ನ್ಯಾಯಾಧೀಶರು, ವಕೀಲರು ಹಣ್ಣು ಸವಿಯುತ್ತಾರೆ. ಇವರೆಲ್ಲರೂ ನಾಗರಾಜುಗೆ ‘ಪ್ರಕೃತಿಯ ಮಗ’ ಎಂದೇ ಕರೆಯುತ್ತಾರೆ.

‘12 ಗಂಟೆ ರಾತ್ರಿಯಲ್ಲಿ ನಾಗರಾಜು ಸಸಿಗಳಿಗೆ ನೀರು ಹಾಕುವುದನ್ನು ಕಂಡಿದ್ದೇನೆ. ಈ ಸ್ಥಳವನ್ನು ನಾವು ಮಳವಳ್ಳಿಯ ಸ್ವರ್ಗ ಎಂದೇ ಕರೆಯುತ್ತೇವೆ. ನಾಗರಾಜು ತಮ್ಮಿಡೀ ಜೀವನವನ್ನು ಪ್ರಕೃತಿಗೆ ಅರ್ಪಿಸಿದ್ದಾರೆ’ ಎಂದು ಸರ್ಕಾರಿ ಐಟಿಐ ಸಿಬ್ಬಂದಿ ಸಿ.ಮಹೇಶ್‌ ಹೇಳುತ್ತಾರೆ.

ಐದು ಸಾವಿರ ಮರ: ಸೈಕಲ್‌ ಹಿಂದೆ ಎರಡು ಬಿಂದಿಗೆ, ಹಾರೆ, ಪಿಕಾಸಿ. ಮುಂದೆ ಬ್ಯಾಗ್‌ನಲ್ಲಿ ಸಸಿ ಇಟ್ಟುಕೊಂಡು ಹೊರಟರೆ ಸರ್ಕಾರಿ ಜಾಗ, ಕಾಲೇಜು ಆವರಣ, ರಸ್ತೆ ಬದಿಗಳಲ್ಲಿ ಸಸಿ ನೆಡುತ್ತಾರೆ. ಮಳವಳ್ಳಿಯಿಂದ ಶಿಂಷಾ, ಕಿರುಗಾವಲು ರಸ್ತೆಗಳಲ್ಲಿ ತಲಾ ಸಾವಿರ ಮರ ಬೆಳೆಸಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿದ್ದು ಐದು ಸಾವಿರಕ್ಕೂ ಹೆಚ್ಚು ಸಸಿಗಳು ಅವರ ಕೈಯಿಂದ ಮರವಾಗಿ ನಿಂತಿವೆ.

ಮಳವಳ್ಳಿ ಪೇಟೆಬೀದಿಯ ದಿವಂಗತ ಚಿಕ್ಕಚನ್ನೇಗೌಡ–ಲಕ್ಷ್ಮಮ್ಮ ದಂಪತಿಯ ಪುತ್ರ ನಾಗರಾಜು ಎಸ್ಸೆಸ್ಸೆಲ್ಸಿ ನಂತರ ಶಾಲೆ ಬಿಟ್ಟು ಸಸಿಗಳ ಜೊತೆ ಬೆಳೆದರು. ಕೆಲಕಾಲ ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸ ಮಾಡಿದರು. ಈಗ ಅವರು ಶಾಂತಿ ಕಾಲೇಜಿನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಮನೆಗಳಿಗೆ ಹಾಲು ಹಾಕುತ್ತಾರೆ, ಸಂಜೆ ಪತ್ರಿಕೆ ಹಂಚುತ್ತಾರೆ. ದುಡಿದ ಹಣವನ್ನು ಸಸಿ ನಿರ್ವಹಣೆಗೆ ಸುರಿಯುತ್ತಾರೆ. ದೂರ ಶಿಕ್ಷಣದ ಮೂಲಕ ರಾಜಕೀಯ ವಿಜ್ಞಾನ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವಿವಾಹಿತರಾಗಿರುವ ಅವರು ಸಸಿ, ಮರಗಳ ಒಡನಾಟದಲ್ಲಿ ತೃಪ್ತಿ ಕಂಡಿದ್ದಾರೆ.

‘ನನಗೆ ಹಲವರು ನೋವು ಕೊಟ್ಟಿದ್ದಾರೆ, ನನ್ನ ಕೆಲಸ ಕಂಡು ಬೈದಿದ್ದಾರೆ. ಆದರೆ ನಾನು ಬೆಳೆಸಿರುವ ಮರಗಳು ನನಗೆ ಎಂದೂ ನೋವು ಕೊಟ್ಟಿಲ್ಲ, ಜರಿದಿಲ್ಲ. ಹಂಗಿಸಿಲ್ಲ’ ಎಂದು ನಾಗರಾಜು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.