ಪ್ರಜಾವಾಣಿ ಚಿತ್ರ
ಬೆಂಗಳೂರು: ಮಲೆನಾಡು ಭಾಗದ ಅರಣ್ಯ ಪ್ರದೇಶದಲ್ಲಿ ಮೂರು ಎಕರೆ ಪಟ್ಟಾ ಜಮೀನು ಹೊಂದಿರುವವರು ಮತ್ತು 64(ಎ)ಅಡಿ ಅರ್ಜಿ ಸಲ್ಲಿಸಿರುವವರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಸೋಮವಾರ ಬಿಜೆಪಿಯ ಆರಗ ಜ್ಞಾನೇಂದ್ರ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿ ಈ ವಿಷಯ ತಿಳಿಸಿದರು.
ಅರಣ್ಯ ಭೂಮಿ ಮತ್ತು ಕಂದಾಯ ಭೂಮಿ ಯಾವುದು ಎಂಬುದರ ಸ್ಪಷ್ಟತೆ ಪಡೆಯಲು ಎರಡೂ ಇಲಾಖೆ ಸೇರಿ ಜಂಟಿ ಸಮೀಕ್ಷೆ ನಡೆಸುವ ಅಗತ್ಯವಿದೆ. ಈಗಾಗಲೇ ಕಂದಾಯ ಇಲಾಖೆ ಕೊಟ್ಟಿರುವ ದಾಖಲೆಗಳನ್ನು ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಆ ಬಳಿಕ ಡಿನೋಟಿಫೈ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಆರಗ ಜ್ಞಾನೇಂದ್ರ ಮಾತನಾಡಿ, ‘ಶಿವಮೊಗ್ಗ ತಾಲ್ಲೂಕು ಹಾಲಲಕ್ಕವಳ್ಳಿಯಲ್ಲಿ ತುಂಗಾ ಅಣೆಕಟ್ಟು ಯೋಜನೆಯಿಂದ ಪುನರ್‌ವಸತಿ ಗ್ರಾಮವಾಗಿರುವ ಕೆಲವು ಜಮೀನುಗಳಿಗೆ ಮಾತ್ರ ಪಕ್ಕಾ ಪೋಡಿ ಆಗಿದ್ದು, ಉಳಿದ ಜಮೀನುಗಳಿಗೆ ಅರಣ್ಯ ಇಲಾಖೆಯ ಆಕ್ಷೇಪ ಇರುವುದರಿಂದ ಒಕ್ಕಲೆಬ್ಬಿಸಬಹುದು ಎಂಬ ಭೀತಿ ರೈತರಿಗೆ ಎದುರಾಗಿದೆ’ ಎಂದರು.
ಎಲ್‌ಟಿ ಕನ್ವರ್ಷನ್‌ಗೆ ಅರ್ಜಿ ಸಲ್ಲಿಸಲಿ
ಅಪಾರ್ಟ್‌ಮೆಂಟ್ ನಿರ್ಮಾಣ ಸಂದರ್ಭದಲ್ಲಿ ಎಚ್‌ಟಿ–4 ಮೂಲಕ ವಿದ್ಯುತ್ ಸಂಪರ್ಕ ಪಡೆದವರು ಫ್ಲ್ಯಾಟ್ ಮಾರಾಟದ ಸಂದರ್ಭದಲ್ಲಿ ಎಲ್‌ಟಿಗೆ ಅರ್ಜಿಗೆ ಸಲ್ಲಿಸಿದರೆ ಪರಿವರ್ತನೆ ಮಾಡಿಕೊಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಬಿಜೆಪಿಯ ಸುರೇಶ್ ಗೌಡ ಪ್ರಶ್ನೆಗೆ ಉತ್ತರಿಸಿದರು
ಬಿಲ್ಡರ್‌ಗಳು ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿ ಫ್ಲ್ಯಾಟ್‌ಗಳನ್ನು ಹಸ್ತಾಂತರಿಸಿದಾಗಲೂ ಎಚ್‌ಟಿ–4 ಸಂಪರ್ಕವೇ ಇರುತ್ತದೆ. ಅದನ್ನು ಬಿಲ್ಡರ್‌ಗಳು ಎಲ್‌ಟಿಗೆ ಪರಿವರ್ತಿಸದ ಕಾರಣ ಫ್ಲ್ಯಾಟ್ ಖರೀದಿಸಿದವರು ವಾಣಿಜ್ಯ ದರದಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡುವ ಸ್ಥಿತಿ ಇದೆ ಎಂದು ಸುರೇಶ್‌ಗೌಡ ಹೇಳಿದರು.
ಸರ್ಕಲ್ ಇನ್‌ಸ್ಪೆಕ್ಟರ್ ವರ್ಗಾವಣೆ
ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ಅವರನ್ನು ಅವಮಾನಿಸುವಂತೆ ನಡೆದುಕೊಳ್ಳುತ್ತಿರುವ, ಶಾಸಕರ ಮಾತಿಗೆ ಬೆಲೆಯೇ ನೀಡದ ಸರ್ಕಲ್ ಇನ್‌ಸ್ಪೆಕ್ಟರ್ ಅವರನ್ನು ತಕ್ಷಣವೇ ವರ್ಗಾಯಿಸಿ, ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
ವಿಷಯ ಪ್ರಸ್ತಾಪಿಸಿದ ಶರಣಗೌಡ ಕಂದಕೂರು, ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಲೆಯೊಂದರಲ್ಲಿ 30 ವಿದ್ಯಾರ್ಥಿನಿಯರಿಗೆ ಶಿಕ್ಷಕರೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದಾಗ, ಅತ್ಯಾಚಾರ ಆಗಿಲ್ಲವಲ್ಲ ಎಂದು ನಿರ್ಲಕ್ಷ್ಯದಿಂದ ಉತ್ತರಿಸಿದರು. ಕೆಡಿಪಿ ಸಭೆಯಲ್ಲೂ ಶಾಸಕರಿಗೆ ಬೆಲೆ ನೀಡುವುದಿಲ್ಲ. ದೂರವಾಣಿ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧ್ವನಿಗೂಡಿಸಿ, ಅಧಿಕಾರಿಯನ್ನು ಅಮಾನತ್ತಿನಲ್ಲಿ ಇಡಬೇಕು ಇಲ್ಲವೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.