ADVERTISEMENT

ದಲಿತನೆಂಬ ಕಾರಣಕ್ಕೆ ಸಿಎಂ ಸ್ಥಾನ ಬೇಡ: ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 18:30 IST
Last Updated 4 ಡಿಸೆಂಬರ್ 2019, 18:30 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: ‘ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಚಾರ ಈಗ ಅಪ್ರಸ್ತುತ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಹ ‘ದಲಿತ ಎಂಬ ಕಾರಣಕ್ಕೆ ನನಗೂ ಮುಖ್ಯಮಂತ್ರಿ ಪಟ್ಟ ಬೇಡ’ ಎಂದು ಕುಟುಕಿದ್ದಾರೆ.

‘ಪದೇಪದೇ ದಲಿತ ನಾಯಕ ಎಂದು ಏಕೆ ಕರೆಯುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಮೀಸಲಾತಿ ಇಲ್ಲ. ಕಳೆದ 50 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಇದ್ದೇನೆ. ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದರೂ ದಲಿತ ಮುಖ್ಯಮಂತ್ರಿ ಎನಿಸಿಕೊಳ್ಳಬೇಕೆ’ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ಮುಖಂಡ ಎನ್ನುವುದಾದರೆ ಮಾತ್ರ ಅವಕಾಶ ನೀಡಲಿ ಎಂದಿದ್ದಾರೆ.

‘ಈ ಹಿಂದೆಯೂ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಪ್ರಸ್ತಾಪ ಬಂದಿತ್ತು. ಆ ವೇಳೆ ದಲಿತ ಎಂಬ ಕಾರಣಕ್ಕೆ ನನಗೆ ಮುಖ್ಯಮಂತ್ರಿ ಸ್ಥಾನ ಬೇಡ ಎಂದು ನಿರಾಕರಿಸಿದ್ದೆ. ಈಗಲೂ ಅದೇ ಮಾತು ಹೇಳುತ್ತೇನೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೈಕಮಾಂಡ್ ಬಳಿ ಅರ್ಜಿ ಹಾಕುವುದಿಲ್ಲ’ ಎಂದರು.

ADVERTISEMENT

‘ಆಪರೇಷನ್ ಕಮಲದ ವಿಚಾರ ನನಗೆ ಗೊತ್ತಿಲ್ಲ. ಆದರೆ ಈಗಿನ ವಾತಾವರಣ ಗಮನಿಸಿದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಫಲಿತಾಂಶದ ನಂತರ ಬಿಜೆಪಿಗೆ ಬಹುಮತದ ಕೊರತೆ ಎದುರಾಗಲಿದ್ದು, ಹೈಕಮಾಂಡ್ ಮುಂದಿನ ನಿರ್ಧಾರ ಕೈಗೊಳ್ಳಲಿದೆ’ ಎಂದರು.

‘ಮೈತ್ರಿ ಸರ್ಕಾರ ಬೀಳಿಸಲು ನನ್ನದೂ ಸಣ್ಣ ಪಾತ್ರವಿದೆ’ ಎಂಬ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಒಳ್ಳೆಯ ಕೆಲಸ ಮಾಡಿ ಬಿಜೆಪಿಗೆ ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.