ADVERTISEMENT

ರಾಜಧಾನಿಯಲ್ಲಿ ಹೋರಾಟ ಮಲೆನಾಡಿಗರ ಎಚ್ಚರಿಕೆ

ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯದ ಸಭೆ: ಮಲೆನಾಡು ಜನಪರ ಒಕ್ಕೂಟ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 19:58 IST
Last Updated 25 ಜೂನ್ 2022, 19:58 IST
ಅನಿಲ್ ಹೊಸಕೊಪ್ಪ
ಅನಿಲ್ ಹೊಸಕೊಪ್ಪ   

ಬೆಂಗಳೂರು: ‘ಮಲೆನಾಡು ವ್ಯಾಪ್ತಿಯ ಜಿಲ್ಲೆಯ ಜನರ ಬೇಡಿಕೆಗಳ ಬಗ್ಗೆ ಸರ್ಕಾರವು ನಿರ್ಲಕ್ಷ್ಯ ವಹಿಸಿದ್ದು, ರಾಜಧಾನಿಯಲ್ಲಿ ಹೋರಾಟ ನಡೆಸ ಲಾಗುವುದು’ ಎಂದು ಮಲೆನಾಡು ಜನಪರ ಒಕ್ಕೂಟ ಎಚ್ಚರಿಸಿದೆ.

‘ಬೇಡಿಕೆ ಈಡೇರಿಕೆಗೆ ಇನ್ನೂ ಕೆಲವು ದಿನ ಕಾಲಾವಕಾಶ ನೀಡುತ್ತೇವೆ. ಬಳಿಕ ಹೋರಾಟ ಆರಂಭಿಸುತ್ತೇವೆ’ ಎಂದುಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ ತಿಳಿಸಿದ್ದಾರೆ.

‘ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಮಲೆನಾಡು ಉಳಿಸಿ ಸಭೆಯಲ್ಲಿ ಕೊಡಗು, ಚಿಕ್ಕಮಗಳೂರು , ಶಿವಮೊಗ್ಗ, ಕುಮಟಾ, ಶಿರಸಿ ಭಾಗದ ರೈತರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾ ಗಿತ್ತು. ಮನವಿಗಳ ಪೈಕಿ ಒಂದು ಬೇಡಿಕೆ ಹೊರತುಪಡಿಸಿದರೆ ಯಾವುದೇ ಬೇಡಿಕೆ ಈಡೇರಿಲ್ಲ’ ಎಂದು ಅವರು ದೂರಿದ್ದಾರೆ.

ADVERTISEMENT

‘ಶಿವಮೊಗ್ಗಕ್ಕೆ ಬಂದಿದ್ದ ಮುಖ್ಯ ಮಂತ್ರಿ ಅವರು ಮೇ ಮೊದಲ ವಾರದಲ್ಲಿ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಇಂದಿಗೂ ಸಭೆ ಕರೆದಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಮುಷ್ಕರ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಬೇಡಿಕೆಗಳು ಏನು?

lಮಲೆನಾಡು ಪ್ರದೇಶವನ್ನು ‘ವಿಶೇಷ ಕೃಷಿ ವಲಯ’ಎಂದು ಘೋಷಿಸಬೇಕು

lಆಶ್ರಯ ಬಡಾವಣೆ ನಿರ್ಮಾಣಕ್ಕೆ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಎಕರೆ ಭೂಮಿ ಮೀಸಲು ಇಡಬೇಕು

lಪರಿಸರ ಸೂಕ್ಷ್ಮ ವಲಯ ಘೋಷಣೆ, ಕಸ್ತೂರಿ ರಂಗನ್‌ ವರದಿ ಯಥಾವತ್ ಜಾರಿ, ಹುಲಿ ಯೋಜನೆ ವಿಸ್ತರಣೆ ಪ್ರಸ್ತಾವ ಪರಿಶೀಲಿಸಿ ಕೈಬಿಡಬೇಕು

lಸಾವಿರಾರು ರೈತರು ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದು, ನಿರ್ಬಂಧ ಸಡಿಲಿಸಿ ಭೂ ಮಂಜೂರಾತಿಗೆ ಅವಕಾಶ ನೀಡಬೇಕು.

lಏಪ್ರಿಲ್‌ 15ರಂದು ಮಲೆನಾಡು ದಿನವಾಗಿ ಆಚರಣೆ ಮಾಡಬೇಕು

lಅಡಿಕೆ ಬೆಳೆಗಾರರ ಹಿತರಕ್ಷಣೆಗೆ ನೇಮಿಸಿದ್ದ ‘ಗೋರಖ್‌ ಸಿಂಗ್‌ ವರದಿ’ ಅನುಷ್ಠಾನಕ್ಕೆ ತರಬೇಕು

lಕಾಡುಪ್ರಾಣಿಗಳಿಂದ ಬೆಳೆ ನಷ್ಟವಾಗುತ್ತಿದ್ದು, ಪರಿಹಾರ ಹೆಚ್ಚಿಸಬೇಕು.

lಬೆಳೆ, ಜೀವನ ರಕ್ಷಣೆಗೆ ಬಂದೂಕು ಪರವಾನಗಿ ನಿಯಮಾವಳಿ ಸರಳೀಕರಣಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.