ADVERTISEMENT

ಮಲೆನಾಡು: ನಿಲ್ಲದ ಮಳೆ, ಮುಂದುವರಿದ ಪ್ರವಾಹ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 18:14 IST
Last Updated 27 ಜುಲೈ 2024, 18:14 IST
<div class="paragraphs"><p>ಶ್ರೀರಂಗಪಟ್ಟಣ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದ ಮುಂದಿನ ವಾಹನ ಪಾರ್ಕಿಂಗ್‌ನಲ್ಲಿ ನೀರು ತುಂಬಿರುವುದು</p></div>

ಶ್ರೀರಂಗಪಟ್ಟಣ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದ ಮುಂದಿನ ವಾಹನ ಪಾರ್ಕಿಂಗ್‌ನಲ್ಲಿ ನೀರು ತುಂಬಿರುವುದು

   

ಮೈಸೂರು/ಶಿವಮೊಗ್ಗ/ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಆರ್ಭಟ ಶನಿವಾರವೂ ಮುಂದುವರೆಯಿತು. ತುಂಗಾ, ಭದ್ರಾ, ಲಿಂಗನಮಕ್ಕಿ, ಮಾಣಿ ಜಲಾಶಯಗಳಿಗೆ ಭಾರಿ ಪ್ರಮಾಣದ ಒಳಹರಿವು ದಾಖಲಾಗಿದೆ. ಕೊಡಗು, ಹಾಸನ ಮತ್ತು ಚಾಮರಾಜನಗರದಲ್ಲಿ ಮಳೆ ಅಬ್ಬರದ ಪರಿಣಾಮ ನೆರೆ, ಭೂ ಕುಸಿತ, ಬೆಳೆ ಹಾನಿ ಆಗಿದೆ. ಹೇಮಾವತಿ ನದಿ ಪ್ರವಾಹ ಮುಂದುವರಿದಿದೆ.

ಹೊಸನಗರ ತಾಲ್ಲೂಕಿನ ಚಕ್ರಾ ಜಲಾಶಯ ವ್ಯಾಪ್ತಿಯಲ್ಲಿ 24 ಗಂಟೆಗಳಲ್ಲಿ ದಾಖಲೆಯ 32.5 ಸೆಂ.ಮೀ ಮಳೆ ಸುರಿದಿದೆ.

ADVERTISEMENT

ಕಡೂರು ತಾಲ್ಲೂಕಿನ ‌ಅಯ್ಯನಕೆರೆ, ತರೀಕೆರೆ ತಾಲ್ಲೂಕಿನ ಜಂಬದಹಳ್ಳಿ ಜಲಾಶಯಗಳು ಭರ್ತಿಯಾಗಿವೆ. ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆ
ಇಳಿಮುಖವಾಗಿತ್ತು.

ಚಿಕ್ಕಮಗಳೂರು ತಾಲ್ಲೂಕಿನ ಆವತಿ ಹೋಬಳಿಯ ತಂಬಳ್ಳಿಪುರದಲ್ಲಿ ಕುಮಾರ್ (32) ಎಂಬವರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಶುಕ್ರವಾರ ಸಂಜೆ ಜಾನುವಾರು ಜತೆಗೆ ಹೋದವರು ಮರಳಿರಲಿಲ್ಲ. ಶನಿವಾರ ಬೆಳಿಗ್ಗೆ ದೊಡ್ಡಹಳ್ಳದಲ್ಲಿ ಶವ ಪತ್ತೆಯಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನುಮನೆಕೊಪ್ಪದ ಸಚಿನ್ (26) ಅವರು ಬೈಕಿನಲ್ಲಿ ಹೋಗುವಾಗ ಅವರ ಮೇಲೆ ಶುಕ್ರವಾರ ತಡರಾತ್ರಿ ಅಕೇಶಿಯಾ ಮರ ಬಿದ್ದು ಮೃತಪಟ್ಟಿದ್ದಾರೆ.

ಶರಾವತಿ ಜಲಾನಯನ ಪ್ರದೇಶ ಹೊಸನಗರ, ಸಾಗರ ತಾಲ್ಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯಕ್ಕೆ 74,514 ಕ್ಯುಸೆಕ್ ನೀರು ಹರಿದುಬರುತ್ತಿದೆ.

ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿ 24 ಗಂಟೆಗಳಲ್ಲಿ 4 ಅಡಿ ನೀರು ಏರಿಕೆಯಾಗಿದೆ. ಜಲಾಶಯ ಭರ್ತಿಗೆ ಇನ್ನು 8 ಅಡಿ ಬಾಕಿ ಇದೆ. ಗಾಜನೂರಿನ ತುಂಗಾ ಜಲಾಶಯ ಭರ್ತಿ ಆಗಿ, ನದಿಗೆ 70,444 ಕ್ಯುಸೆಕ್ ನೀರು ಬಿಡಲಾಗುತ್ತಿದೆ.

ಕರಾವಳಿ ಜಿಲ್ಲೆಗಳಲ್ಲಿ ಇದೇ 28ರಂದು ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೇ 28ರಂದು ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ.

ಸಂಪರ್ಕ ಕಡಿತ: ಹೊಳೆನರಸೀಪುರ, ಗೊರೂರು, ಮರಡಿ, ಹೆಬ್ಬಾಲೆ, ಅತ್ನಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಅತ್ನಿ ಸಮೀಪದ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಆಲೂರು, ಹೊಳೆನರಸೀಪುರ ತಾಲ್ಲೂಕುಗಳಲ್ಲಿ ನೂರಾರು ಎಕರೆ ಬೆಳೆ ಮುಳುಗಿದೆ.

ಕೊಡಗು ಜಿಲ್ಲೆಯಲ್ಲಿ ಮಳೆ ತಗ್ಗಿದೆ. ಬೈಂದೂರು- ವಿರಾಜಪೇಟೆ ರಾಜ್ಯ ಹೆದ್ದಾರಿ ಸೇರಿ ಹಲವೆಡೆ ರಸ್ತೆಗೆ ಮಣ್ಣು ಕುಸಿದಿದೆ. ವಿದ್ಯುತ್ ಕಂಬಗಳು ಬಿದ್ದು, ಜಿಲ್ಲಾಕೇಂದ್ರ ಸೇರಿ ಬಹುಭಾಗದಲ್ಲಿ ವಿದ್ಯುತ್‌ ಇರಲಿಲ್ಲ. ಮರಗಳು ಬುಡಮೇಲಾ ಗುತ್ತಿದ್ದು, ಸೆಸ್ಕ್ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ದುರಸ್ತಿ ಕಾರ್ಯ ಸ್ಥಗಿತ
ಗೊಳಿಸಲಾಗಿತ್ತು.

ವಿರಾಜಪೇಟೆ– ಬೈಂದೂರು ರಾಜ್ಯ ಹೆದ್ದಾರಿಯಲ್ಲಿ ಮಕ್ಕಂದೂರು ಸಮೀಪ ಗುಡ್ಡದ ಮಣ್ಣು ಕುಸಿದಿದೆ. ಮಂಡ್ಯದ ಶ್ರೀರಂಗಪಟ್ಟಣದ ಸಮೀಪ ವಿಸಿಆರ್ ಲೇಔಟ್‌ ಸಂಪರ್ಕ ಕಡಿತವಾಗಿದೆ. ದೇವಾಲಯಗಳು ಜಲಾವೃತವಾಗಿವೆ.

ಮೈಸೂರು, ಕೆಆರ್‌ಎಸ್‌, ರಂಗನತಿಟ್ಟು ಪಕ್ಷಿಧಾಮ, ಹುಣಸೂರಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ, ಪಶ್ಚಿಮವಾಹಿನಿ ಸಮೀಪ ರೈಲ್ವೆ ಹಳಿಯ ಕೆಳ ಸೇತುವೆ ಜಲಾವೃತವಾಗಿದೆ. ಕೊಳ್ಳೇಗಾಲ ತಾಲ್ಲೂಕಿನ 9 ಗ್ರಾಮಗಳ ನೂರಾರು ಎಕರೆಯಲ್ಲಿ ಬೆಳೆದಿದ್ದ ಭತ್ತ, ಜೋಳ, ಕಬ್ಬು, ಟೊಮೆಟೊ ನಾಶವಾಗಿದೆ. ಪಂಪ್‌ಸೆಟ್‌ಗಳಿಗೆ ಹಾನಿಯಾಗಿದೆ. ಹಳೆ ಅಣಗಳ್ಳಿ–ಹರಳೆ ಸಂಪರ್ಕ ರಸ್ತೆ, ಹಂಪಾಪುರದ ದೇವಸ್ಥಾನದ ಮುಖ್ಯ ರಸ್ತೆ ಜಲಾವೃತವಾಗಿದೆ. ನೆರೆಪೀಡಿತ ಗ್ರಾಮಗಳ ಜನರ ವಾಸ್ತವ್ಯಕ್ಕೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

3 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: (ಯಾದಗಿರಿ ವರದಿ): ಬಸವಸಾಗರ ಜಲಾಶಯದ 30 ಗೇಟ್‌ ತೆರೆದು ನಿರಂತರವಾಗಿ 3 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಜಲಧಾರೆ ಕಣ್ಣುತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಶನಿವಾರ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.