ADVERTISEMENT

ಕೋವಿಡ್ ಅಪಾಯ: ಅಪೌಷ್ಟಿಕತೆ ಸುಳಿಯಲ್ಲಿ 4.43 ಲಕ್ಷ ಮಕ್ಕಳು

ಕೊರೊನಾ ಕಂಟಕ ಸಾಧ್ಯತೆ * ವೈದ್ಯಕೀಯ ತಜ್ಞರು ಕಳವಳ

ವರುಣ ಹೆಗಡೆ
Published 20 ಮೇ 2021, 19:50 IST
Last Updated 20 ಮೇ 2021, 19:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಆರು ವರ್ಷದೊಳಗಿನ 4.43 ಲಕ್ಷ ಮಕ್ಕಳು ಅಪೌಷ್ಟಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಕೋವಿಡ್‌ ಮೂರನೇ ಅಲೆಯು ಇವರಿಗೆ ಹೆಚ್ಚಿನ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೂರನೇ ಅಲೆಗೆ ಮುನ್ನ ಈ ಮಕ್ಕಳಿಗೆ ಲಸಿಕೆ ಕೊಡುವುದಕ್ಕೆ ನೀಡುವಷ್ಟೇ ಆದ್ಯತೆಯನ್ನು ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಿ, ಅವರನ್ನು ಸಬಲರಾಗಿಸುವ ವಿಷಯದಲ್ಲೂ ನೀಡಬೇಕಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಕೋವಿಡ್ ಮೊದಲ ಅಲೆಯಲ್ಲಿ 60 ವರ್ಷ ದಾಟಿದವರು ಹೆಚ್ಚಿನ ಸಂಖ್ಯೆಯಲ್ಲಿ ಅಸ್ವಸ್ಥರಾಗಿ, ಸಮಸ್ಯೆ ಎದುರಿಸಿದ್ದರು. ಎರಡನೇ ಅಲೆಯಲ್ಲಿ ಮಧ್ಯವಯಸ್ಕರು ಅಧಿಕ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಅಕ್ಟೋಬರ್ ಬಳಿಕ ಕಾಣಿಸಿಕೊಳ್ಳುವ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹೆಚ್ಚು ಬಾಧಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ADVERTISEMENT

18 ವರ್ಷದೊಳಗಿನವರಿಗೆ ಲಸಿಕೆ ಇನ್ನೂ ಪ್ರಯೋಗದ ಹಂತದಲ್ಲಿಯೇ ಇರುವುದು ಇದಕ್ಕೆ ಕಾರಣ ಎಂದೂ ಹೇಳಲಾಗಿದೆ.

ಮಕ್ಕಳ ಆರೋಗ್ಯ ಹದಗೆಡಲು ಪ್ರಮುಖ ಕಾರಣವಾಗಿರುವ ಅಪೌಷ್ಟಿಕತೆಯ ಸಮಸ್ಯೆ ಕುರಿತು ಅಗತ್ಯವಿರುವಷ್ಟು ಗಮನ ಹರಿಸಿಲ್ಲ ಎಂಬ ಚರ್ಚೆಯೂ ಇದೆ. ಏಕೆಂದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಹಿತಿ ಪ್ರಕಾರ ಆರು ವರ್ಷದೊಳಗಿನ 34.74 ಲಕ್ಷ ಮಕ್ಕಳು ಅಂಗನವಾಡಿಗಳಲ್ಲಿ ದಾಖಲಾತಿ ಹೊಂದಿದ್ದಾರೆ. ಅವರಲ್ಲಿ ಶೇ 11.14 ರಷ್ಟು ಮಕ್ಕಳು ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿದ್ದಾರೆ.

ರಾಜ್ಯದಲ್ಲಿ ಈವರೆಗೆ 23 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿತರಾಗಿದ್ದಾರೆ. ಈ ಪೈಕಿ, 10 ವರ್ಷದೊಳಗಿನವರಲ್ಲಿ 65,857 ಮಕ್ಕಳು ಹಾಗೂ 10ರಿಂದ 20 ವರ್ಷದೊಳಗಿನವರಲ್ಲಿ 1.66 ಲಕ್ಷ ಮಂದಿ (ಮೇ 17) ಮಾತ್ರ ಕೋವಿಡ್ ಪೀಡಿತರಾಗಿದ್ದಾರೆ. ಸೋಂಕಿನ ತೀವ್ರತೆ ಅಷ್ಟಾಗಿ ಇರದ ಕಾರಣ ಮಕ್ಕಳಲ್ಲಿನ ಮರಣ ಪ್ರಮಾಣ ಶೇ 0.1ರಷ್ಟಿದೆ. ಆದರೆ, ಮೂರನೇ ಅಲೆಯಲ್ಲಿ ಸೋಂಕು ದೃಢ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಅಪೌಷ್ಟಿಕ ಮಕ್ಕಳಿಗೆ ಅಪಾಯ: ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿವೆ. ಕೋವಿಡ್‌ ಕಾಣಿಸಿಕೊಂಡ ಬಳಿಕ ಅಂಗನವಾಡಿ ಕೇಂದ್ರಗಳಿಗೆ ಬೀಗ ಬಿದ್ದ ಕಾರಣ ಮಕ್ಕಳ ಮನೆಗೆ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಇಷ್ಟಾಗಿಯೂ ಲಕ್ಷಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಪರಿಣಾಮ ಈ ಸಮಸ್ಯೆ ಎದುರಿಸುತ್ತಿರುವ ಮಕ್ಕಳಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿ ಇರಲಿದೆ ಎಂದು ಮಕ್ಕಳ ತಜ್ಞರು ಎಚ್ಚರಿಸಿದ್ದಾರೆ.

‘ಈಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಪ್ರಾರಂಭವಾಗಿದೆ. ಆದರೆ, ದೇಶದಲ್ಲಿ ಲಸಿಕೆಯ ಪ್ರಯೋಗ ಮಕ್ಕಳ ಮೇಲೆ ನಡೆಯದ ಕಾರಣ ಅವರಿಗೆ ವಿತರಿಸುತ್ತಿಲ್ಲ. ಹೀಗಾಗಿ, ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಸಮಸ್ಯೆ ತಂದೊಡ್ಡುವ ಸಾಧ್ಯತೆಯಿದೆ’ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಬಿ.ಎಲ್. ಶಶಿಭೂಷಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುವ ಸಾಧ್ಯತೆಯಿದೆ. ಆದಷ್ಟು ಬೇಗ ಲಸಿಕೆ ಒದಗಿಸುವ ಮೂಲಕ ಅವರಿಗೆ ರಕ್ಷಣೆ ಒದಗಿಸಬೇಕು. ಪ್ರಯೋಗದ ಪ್ರಕ್ರಿಯೆಯನ್ನು ವೇಗವಾಗಿ ನಡೆಸಬೇಕು. ಅಪೌಷ್ಟಿಕತೆ ಎದುರಿಸುತ್ತಿರುವ ಮಕ್ಕಳಿಗೆ ಹೆಚ್ಚಿನ ಅಪಾಯ ಇರಲಿದೆ’ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಡಾ. ಎಸ್‌. ಶ್ರೀನಿವಾಸ್ ಎಚ್ಚರಿಸಿದರು.

‘ಮಕ್ಕಳಲ್ಲಿ ಅಪೌಷ್ಟಿಕ ಸಮಸ್ಯೆ ಇಳಿಕೆ’

‘ಕೋವಿಡ್‌ನಿಂದ ಅಂಗನವಾಡಿಗಳು ಸ್ಥಗಿತವಾಗಿರುವುದರಿಂದ ಮಕ್ಕಳ ಮನೆಗೇ ಆಹಾರ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ. ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಕೆಲವೊಂದು ಚಟುವಟಿಕೆಗಳನ್ನು ಮಾಡಿಸಲಾಗುತ್ತಿದೆ. ವಿವಿಧ ಲಸಿಕೆಗಳ ವಿತರಣೆ ಹಾಗೂ ಆರೋಗ್ಯ ತಪಾಸಣೆ ಕೂಡ ಕ್ರಮಬದ್ಧವಾಗಿ ನಡೆಯುತ್ತಿದೆ. ಅಪೌಷ್ಟಿಕತೆ ನಿವಾರಣೆಗೆ ಮೊಟ್ಟೆ, ಹಾಲು ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಇದರಿಂದ ಅಪೌಷ್ಟಿಕ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕಿ ಉಷಾ ಬಿ. ತಿಳಿಸಿದರು.

***

ಅಪೌಷ್ಟಿಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇದರಿಂದಾಗಿ ಸೋಂಕು ತಗಲುವ ಸಾಧ್ಯತೆ ಹೆಚ್ಚಿರಲಿದೆ. ನ್ಯುಮೋನಿಯಾ ಸೇರಿದಂತೆ ವಿವಿಧ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

– ಡಾ. ಕೆ.ಎಸ್. ಸಂಜಯ್, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.