ADVERTISEMENT

ಒಂಟಿಯಾಗಿ ಸೈಕಲ್‌ನಲ್ಲಿ ದೇಶ ಪರ್ಯಟನೆ: ಕಾರವಾರ ತಲುಪಿದ ಕೊಲ್ಕತ್ತಾ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 15:44 IST
Last Updated 18 ಫೆಬ್ರುವರಿ 2021, 15:44 IST
ಸೈಕಲ್‌ನಲ್ಲಿ ದೇಶ ಪರ್ಯಟನೆ ಮಾಡುತ್ತಿರುವ ಪರಿಮಳ ಕಾಂಜಿ
ಸೈಕಲ್‌ನಲ್ಲಿ ದೇಶ ಪರ್ಯಟನೆ ಮಾಡುತ್ತಿರುವ ಪರಿಮಳ ಕಾಂಜಿ   

ಕಾರವಾರ: ಕೊಲ್ಕತ್ತಾದ ಈ ವ್ಯಕ್ತಿಯು, ದೇಶ ಪರ್ಯಟನೆಗೆ ಆಯ್ಕೆ ಮಾಡಿದ್ದು ಸೈಕಲ್ ಸವಾರಿಯನ್ನು. ಜ.1ರಂದು ಪ್ರಯಾಣ ಆರಂಭಿಸಿ, ಗುರುವಾರ ಕಾರವಾರಕ್ಕೆ ತಲುಪಿ ಗೋವಾದತ್ತ ಸಾಗಿದರು.

54 ವರ್ಷದ ಪರಿಮಳ ಕಾಂಜಿ ಎಂಬುವವರೇ ಇಂಥ ಸಾಹಸ ಮಾಡುತ್ತಿರುವವರು. ಕೊಲ್ಕತ್ತಾದ ಬೋಡೊ ಬಜಾರ್ ನಿವಾಸಿಯಾಗಿರುವ ಇವರು, ದೇಶದ ವಿವಿಧ ಸಂಸ್ಕೃತಿಗಳನ್ನು ಪರಿಚಯಿಸಿಕೊಳ್ಳುವುದು, ಪರಿಸರ ಸಂರಕ್ಷಣೆ, ಸಸ್ಯ ಸಂಪತ್ತಿನ ಪಾಲನೆ ಹಾಗೂ ನೀರಿನ ರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತ ಸೈಕಲ್ ತುಳಿಯುತ್ತಿದ್ದಾರೆ.

ದೇಶದ ಕರಾವಳಿ ರಾಜ್ಯಗಳಾದ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಕರ್ನಾಟಕದ ಮೂಲಕ ಗೋವಾ, ಮಹಾರಾಷ್ಟ್ರ, ಗುಜರಾತ್ ಮೂಲಕ ಸಾಗುವುದು ಅವರ ಗುರಿಯಾಗಿದೆ.

ADVERTISEMENT

‘48 ದಿನಗಳಿಂದ ಸೈಕಲ್‌ನಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದೇನೆ. ದಿನವೊಂದಕ್ಕೆ 100ರಿಂದ 120 ಕಿಲೋಮೀಟರ್ ದೂರ ಸಾಗುತ್ತೇನೆ. ಒಂದು ವರ್ಷದ ಅವಧಿಯಲ್ಲಿ ಇಡೀ ದೇಶವನ್ನು ಸಂಚರಿಸುವ ಗುರಿ ಹೊಂದಿದ್ದೇನೆ. ಸಾಗಬೇಕಾದ ದಾರಿಗೆ ‍ಪುಸ್ತಕದಲ್ಲಿರುವ ನಕ್ಷೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಅವರು ಸುದ್ದಿಗಾರರಿಗೆ ವಿವರಿಸಿದರು.

‘ಇಷ್ಟು ದಿನದ ಪ್ರಯಾಣದಲ್ಲಿ ನನಗೆ ಹಣದ ಅವಶ್ಯಕತೆಯೇ ಬಂದಿಲ್ಲ. ನನ್ನನ್ನು ಕಂಡು ಮಾತನಾಡಿಸುವ ಜನರೇ ಊಟ, ತಿಂಡಿ, ಪಾನೀಯ ನೀಡುತ್ತಿದ್ದಾರೆ. ಮೊಬೈಲ್ ಫೋನ್ ಚಾರ್ಜ್ ಮಾಡಲೆಂದು ಯಾರೋ ಒಬ್ಬರು ಸೌರ ಫಲಕವನ್ನು ನನಗೆ ನೀಡಿದ್ದಾರೆ. ಅದನ್ನು ಸೈಕಲ್‌ನಲ್ಲಿ ಅಳವಡಿಸಿದ್ದು, ಬಳಕೆ ಮಾಡಿಕೊಳುತ್ತಿದ್ದೇವೆ. ಈವರೆಗೆ ಏಳು ಬಾರಿ ಸೈಕಲ್‌ನ ಚಕ್ರ ಬದಲಾಯಿಸಿದ್ದೇನೆ’ ಎಂದು ತಮ್ಮ ಪ್ರಯಾಣದ ವಿವರನ್ನು ಬಿಡಿಸಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.