ADVERTISEMENT

ಕಡಗದಾಳು ರಸ್ತೆಯಲ್ಲಿ ಕಸ ಹಾಕಿದ ವ್ಯಕ್ತಿಗೆ ತರಾಟೆ

ಕಸ ಕೊಂಡೊಯ್ಯುವಂತೆ ಮಾಡಿದ ಗ್ರೀನ್‌ ಸಿಟಿ ಫೋರಂ ಸದಸ್ಯರು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 13:51 IST
Last Updated 6 ನವೆಂಬರ್ 2020, 13:51 IST
ಕಸ ಎಸೆದ ವ್ಯಕ್ತಿಯಿಂದಲೇ ಕಸ ತೆಗೆಸಲಾಯಿತು
ಕಸ ಎಸೆದ ವ್ಯಕ್ತಿಯಿಂದಲೇ ಕಸ ತೆಗೆಸಲಾಯಿತು   

ಮಡಿಕೇರಿ: ತಾಲ್ಲೂಕಿನ ಕಡಗದಾಳು ರಸ್ತೆಯಲ್ಲಿ ಕಸ ಎಸೆದ ವ್ಯಕ್ತಿಗೆ ‘ಗ್ರೀನ್‌ ಸಿಟಿ ಫೋರಂ’ ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆದಿದೆ.

ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಫೋರಂ ಸದಸ್ಯರು, ಕಸ ಹಾಗೂ ಪ್ಲಾಸ್ಟಿಕ್‌ ಅನ್ನು ಎಸೆದು ಹೋಗುತ್ತಿದ್ದನ್ನು ಕಂಡು, ಆತನನ್ನೇ ಕರೆಸಿ ಕಸ ಕೊಂಡೊಯ್ಯುವಂತೆ ಮಾಡಿದ್ದಾರೆ.

‘ನಾನು ತಿರುವಿನಲ್ಲಿ ಕಸ ಇಟ್ಟಿದ್ದೆ. ಆದರೆ, ನಾಯಿ ರಸ್ತೆಯ ಬದಿಗೆ ತಂದು ಹಾಕಿದೆ’ ಎಂದು ಕಸ ಎಸೆದ ವ್ಯಕ್ತಿ ಸಮಜಾಯಿಷಿಕೆ ನೀಡಲು ಮುಂದಾಗಿದ್ದಾರೆ. ಅವರನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು, ಬುದ್ಧಿ ಹೇಳುವ ಕೆಲಸ ಮಾಡಿದ್ದಾರೆ. ‘ಕಸವನ್ನು ಟ್ರಾಕ್ಟರ್‌ಗೆ ಹಾಕಬೇಕು. ಇಂತಹ ವ್ಯಕ್ತಿಗಳಿಗೆ ಕೊಡಗಿನ ಜನರು ಬುದ್ಧಿ ಕಲಿಸಬೇಕು’ ಎಂದು ಗ್ರೀನ್‌ ಸಿಟಿ ಫೋರಂ ಸದಸ್ಯರು ಮನವಿ ಮಾಡಿದ್ದಾರೆ.

ADVERTISEMENT

ಇತ್ತೀಚಿನ ಎರಡು ಘಟನೆಗಳು:ಈಚೆಗೆ ಚೆಟ್ಟಳ್ಳಿ ಮಾರ್ಗದಲ್ಲಿ (ಕೊಡಗು ವಿದ್ಯಾಲಯದ ಬಳಿ) ಪ್ರವಾಸಿಗರು ತಾವು ಖರೀದಿಸಿ ತಂದಿದ್ದ ಫಿಜ್ಜಾವನ್ನು ತಮ್ಮ ವಾಹನದಲ್ಲೇ ಕುಳಿತು ತಿಂದು ನಂತರ ಅದರ ಬಾಕ್ಸ್ ಮತ್ತು ಕಸವನ್ನು ರಸ್ತೆಯಲ್ಲೆ ಸುರಿದು, ಗಲೀಜು ಮಾಡಿ ಅಲ್ಲಿಂದ ಮೈಸೂರು ಮಾರ್ಗವಾಗಿ ಪ್ರವಾಸಿಗರು ತೆರಳಿದ್ದರು.

ಈ ಮಾರ್ಗವಾಗಿ ತೆರಳುತ್ತಿದ್ದ ಮಾದೇಟ್ಟಿರ ತಿಮ್ಮಯ್ಯ ಅವರು ಇದನ್ನು ಗಮನಿಸಿ ತಕ್ಷಣವೇ ಆ ಬಾಕ್ಸ್‌ ಪರಿಶೀಲಿಸಿದಾಗ ಅದರಲ್ಲಿ ಫಿಜ್ಜಾ ಖರೀದಿದಾರನ ಹೆಸರು, ವಿಳಾಸ ಮತ್ತು ಫೋನ್ ನಂಬರ್ ಪತ್ತೆಯಾಗಿತ್ತು. ಕೂಡಲೇ ಕಾರ್ಯ ಪ್ರವೃತ್ತನಾದ ತಿಮ್ಮಯ್ಯ, ಅ ನಂಬರ್‌ಗಳಿಗೆ ಕರೆಮಾಡಿ ಕಸ ತೆಗೆದು ಹೋಗುವಂತೆ ತಾಕೀತು ಮಾಡಿದ್ದರು. ಪಿರಿಯಾಪಟ್ಟಣ ತಲುಪಿದ್ದ (ಸುಮಾರು 90 ಕಿ.ಮೀ) ಪ್ರವಾಸಿಗರು ತಿಮ್ಮಯ್ಯ ಅವರ ಕರೆಗೆ ಸ್ಪಂದಿಸಿ ಮರಳಿ ತಾವು ಕಸ ಎಸೆದಿದ್ದ ಚೆಟ್ಟಳ್ಳಿ ರಸ್ತೆಗೆ ವಾಪಸ್‌ ಬಂದು, ತಾವು ಕಸ ಹಾಕಿದ್ದ ಪ್ರದೇಶದಲ್ಲಿದ್ದ ಕಸವನ್ನೆಲ್ಲ ತೆಗೆದು, ಶುಚಿಗೊಳಿಸಿ ಕಸವನ್ನೂ ಕೊಂಡೊಯ್ದಿದ್ದರು.

ಇನ್ನು ಕಳೆದ ಅ.24ರಂದು ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಸುರಿದು ಹೋಗಿದ್ದ ವ್ಯಕ್ತಿಗಳಿಂದಲೇ ತ್ಯಾಜ್ಯವನ್ನು ತೆಗೆಸಿ ಸ್ವಚ್ಛ ಮಾಡಿಸಿದ ಘಟನೆ ಕತ್ತಲೆಕಾಡು ಗ್ರಾಮದಲ್ಲಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.