ADVERTISEMENT

‘ಅರ್ಜುನನ ಜೊತೆ ಚಕ್ರವ್ಯೂಹ ಭೇದಿಸುವ ಅಭಿಮನ್ಯು ನಿಖಿಲ್‌’

ಲಕ್ಷಾಂತರ ಜನರ ನಡುವೆ ಮೈತ್ರಿ ಅಭ್ಯರ್ಥಿಯ ಮೆರವಣಿಗೆ; ಮುಖ್ಯಮಂತ್ರಿ ಕುಮಾರಸ್ವಾಮಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 20:30 IST
Last Updated 25 ಮಾರ್ಚ್ 2019, 20:30 IST
ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜನಸಾಗದ ಜೊತೆ ನಿಖಿಲ್‌ ಕುಮಾರಸ್ವಾಮಿ ಮೆರವಣಿಗೆಯಲ್ಲಿ ಸಾಗಿದರು
ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜನಸಾಗದ ಜೊತೆ ನಿಖಿಲ್‌ ಕುಮಾರಸ್ವಾಮಿ ಮೆರವಣಿಗೆಯಲ್ಲಿ ಸಾಗಿದರು   

ಮಂಡ್ಯ: ‘ಕುರುಕ್ಷೇತ್ರ ಮಹಾಯುದ್ಧದಲ್ಲಿ ಅರ್ಜುನ ಜೊತೆಯಲ್ಲಿ ಇಲ್ಲದ ಕಾರಣ ಅಭಿಮನ್ಯುವಿಗೆ ಚಕ್ರವ್ಯೂಹ ಭೇದಿಸಲು ಸಾಧ್ಯವಾಗಲಿಲ್ಲ. ಆದರೆ ಮಂಡ್ಯ ಕುರುಕ್ಷೇತ್ರದಲ್ಲಿ ಅರ್ಜುನನಾಗಿ ನಾನು ಜೊತೆಯಲ್ಲಿದ್ದು, ನಿಖಿಲ್‌ ಅಭಿಮನ್ಯುವಾಗಿ ಚಕ್ರವ್ಯೂಹ ಭೇದಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಣ್ಣಿಸಿದರು.

ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಸೋಮವಾರ ನಾಮಪತ್ರ ಸಲ್ಲಿಸಿದ ನಂತರ ಕಾವೇರಿ ಉದ್ಯಾನದಲ್ಲಿ ಕಿಕ್ಕಿರಿದು ತುಂಬಿದ್ದ ಜನಸ್ತೋಮದ ಎದುರು ಕುರುಕ್ಷೇತ್ರದ ಕತೆ ಬಿಚ್ಚಿಟ್ಟರು.

ಅಭಿಮನ್ಯು ಚಕ್ರವ್ಯೂಹ ಭೇದಿಸುವುದಿಲ್ಲ ಎಂದು ಕೆಲವರು ಮಾತನಾಡುತ್ತಿದ್ದಾರೆ. ಆದರೆ ‘ಮಂಡ್ಯ ಮಹಾಭಾರತ’ ವಿಶೇಷವಾದುದು. ಇಲ್ಲಿ 8 ಜನ ಜೆಡಿಎಸ್‌ ಶಾಸಕರಿದ್ದಾರೆ, ಮೂವರು ವಿಧಾನ ಪರಿಷತ್‌ ಸದಸ್ಯರಿದ್ದಾರೆ. ಸಾವಿರಾರು ಕಾರ್ಯಕರ್ತರಿದ್ದಾರೆ. ಇವರೆಲ್ಲರ ಬೆಂಬಲ, ಎಚ್‌.ಡಿ.ದೇವೇಗೌಡ ಹಾಗೂ ನನ್ನ ಬೆಂಗಾವಲಿನಲ್ಲಿ ನಿಖಿಲ್‌ ಚಕ್ರವ್ಯೂಹ ಭೇದಿಸಲಿದ್ದಾರೆ. ಕುರುಕ್ಷೇತ್ರ ಚಲನಚಿತ್ರದ ನಿರ್ಮಾಣ ಮಾಡಿರುವ ನಿರ್ಮಾಪಕ ಮುನಿರತ್ನ ಇಲ್ಲೇ ಇದ್ದಾರೆ. ಅವರ ಬೆಂಬಲವೂ ಅಭಮನ್ಯುವಿಗೆ ಇದೆ’ ಎಂದು ಪರೋಕ್ಷವಾಗಿ ನಟ ದರ್ಶನ್‌ ಅವರನ್ನು ತಿವಿದರು.

ADVERTISEMENT

ಬಿಜೆಪಿ ಬೆಂಬಲಿತ ಅಭ್ಯರ್ಥಿ ಬೇಕಾ?: ‘ನಾನು ಬಜೆಟ್‌ ಮಂಡಿಸಿದಾಗ, ಅದನ್ನು ಮಂಡ್ಯ ಬಜೆಟ್‌ ಎಂದು ಬಿಜೆಪಿ ಮುಖಂಡರು ಟೇಬಲ್‌ ಕುಟ್ಟಿದ್ದರು. ಜಿಲ್ಲೆಯ ವಿರೋಧಿಯಾಗಿರುವ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ನಿಮಗೆ ಬೇಕಾ. ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ ಪಕ್ಷೇತರ ಅಭ್ಯರ್ಥಿ ಪರ ಮತ ಕೇಳಲು ಬರುತ್ತಾರಂತೆ. ಮಂಡ್ಯ ವಿರೋಧಿಯಾಗಿರುವ ಅವರನ್ನು ನೀವು ಪ್ರಚಾರಕ್ಕೆ ಬಿಡಬೇಕಾ. ಜಿಲ್ಲೆಯನ್ನು ಲಘುವಾಗಿ ಕಾಣುವ ನಾಯಕರಿಗೆ ಬೆಂಬಲ ಕೊಡುತ್ತೀರಾ’ ಎಂದು ಪ್ರಶ್ನಿಸಿದರು.

ಅಂಬರೀಷ್‌ ಆತ್ಮಕ್ಕೆ ಶಾಂತಿ: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ ‘ಎಚ್‌.ಡಿ.ಕುಮಾರಸ್ವಾಮಿ, ಅಂಬರೀಷ್‌ ಆತ್ಮೀಯ ಗೆಳೆಯರು. ನಿಖಿಲ್‌ ಅವರಿಗೆ ಮತ ನೀಡಿದರೆ ಅಂಬರೀಷ್‌ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೇರೆ ಕ್ಷೇತ್ರ ಕೊಡುವುದಾಗಿ ತಿಳಿಸಿದ್ದೆವು. ಸ್ಥಾನ ಕೊಡುವುದಾಗಿಯೂ ಭರವಸೆ ಕೊಟ್ಟೆವು. ಆದರೂ ಸ್ಪರ್ಧೆ ಮಾಡಿದ್ದಾರೆ. ಅವರ ಹಿಂದೆ ಬೇರೆಯವರು ಕೀ ಕೊಡುತ್ತಿದ್ದಾರೆ. ಆದರೆ ನಿಜವಾದ ಬೀಗದ ಕೈ ಜನರ ಬಳಿ ಇದೆ’ ಎಂದರು.

ಮೆರವಣಿಗೆ ವೈಭವ: ಕಾಳಿಕಾಂಬ ದೇವಾಲಯದಲ್ಲಿ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯುದ್ದಕ್ಕೂ ನೂರಾರು ಎತ್ತಿನಗಾಡಿಗಳು, ಸಾವಿರಾರು ಬೈಕ್‌ಗಳು ಭಾಗವಹಿಸಿದ್ದವು. ಕುಮಾರಸ್ವಾಮಿ, ನಿಖಿಲ್‌ ಅವರನ್ನು ಹಾಡಿ ಹೊಗಳುವ ಡಿಜೆಗಳು ಮೊಳಗಿದವು. ಹಸಿರು ಸೀರೆಯುಟ್ಟು ತೆನೆ ಹೊತ್ತಿದ್ದ ಮಹಿಳೆಯರು ನೃತ್ಯ ಮಾಡಿದರು. ಬಣ್ಣದ ಪೇಪರ್‌ ಮಳೆಗರೆಯುವ ಬೃಹತ್‌ ವಾಹನ ತರಿಸಲಾಗಿತ್ತು. ಡ್ರೋನ್‌ ಕ್ಯಾಮೆರಾ ಕಣ್ಣುಗಳು ಮುಗಿಲು ಮುಟ್ಟಿದ್ದವು. ‘ನಾನು ನಿಖಿಲ್‌’ ಹೆಸರಿನ ಟಿ– ಶರ್ಟ್‌ ತೊಟ್ಟಿದ್ದ ಯುವಕರು ಗಮನ ಸೆಳೆದರು.

ಉರಿ ಬಿಸಿಲಲ್ಲಿ ಭಾಷಣ

ಕಾವೇರಿ ಉದ್ಯಾನದಲ್ಲಿ ಸಾವಿರಾರು ಜನರ ಎದುರು ಉರಿ ಬಿಸಿಲಿನಲ್ಲಿ ಬಸ್‌ ಮೇಲೆ ನಿಂತು ಮುಖಂಡರು ಭಾಷಣ ಮಾಡಿದರು. ಒಂದೂವರೆ ಗಂಟೆ ಕಾಲ ಬಿಸಿಲು ಲೆಕ್ಕಿಸದೆ ಮಾತನಾಡಿದರು. ಯಾವುದೇ ವೇದಿಕೆ, ಕುರ್ಚಿ ಇರಲಿಲ್ಲ. ಉದ್ಯಾನದ ಸುತ್ತಲೂ 10 ಎಲ್‌ಇಡಿ ಪರದೆ ಹಾಕಲಾಗಿತ್ತು.

ಕಾವೇರಿ ಮಾತೆ, ಸರ್‌ ಎಂ.ವಿಶ್ವೇಶ್ವರಯ್ಯ, ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ, ಗಿಡ, ಮರ, ಸಸಿ, ಹುಲ್ಲುಹಾಸು ಇರುವ ಐತಿಹಾಸಿಕ ಉದ್ಯಾನವನ್ನು ರಾಜಕೀಯ ಕಾರ್ಯಕ್ರಮಕ್ಕೆ ನೀಡಿರುವುಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು.

ಚಿತ್ರ ನಿರ್ಮಾಪಕರ ಬೆಂಬಲ

ಚಿತ್ರ ನಿರ್ಮಾಪಕರಾದ ಮುನಿರತ್ನ, ಸಾ.ರಾ.ಗೋವಿಂದು ಮೆರವಣಿಗೆಯಲ್ಲಿ ಪಾಲ್ಗೊಂಡು ನಿಖಿಲ್‌ಗೆ ಬೆಂಬಲ ಸೂಚಿಸಿದರು.

ಮುನಿರತ್ನ ಮಾತನಾಡಿ ‘ಅಂಬರೀಷ್‌ ನಿಧನರಾದಾಗ ನಿಖಿಲ್‌ ಮಧ್ಯರಾತ್ರಿ 2 ಗಂಟೆಗೆ ಆಸ್ಪತ್ರೆಗೆ ತೆರಳಿದ್ದರು. ಮೃತದೇಹದ ಅಂತ್ಯಕ್ರಿಯೆ ನಡೆಸಲು ಅವರೇ ಜಾಗ ಗುರುತಿಸಿದರು. ಮಂಡ್ಯಕ್ಕೆ ನಿಖಿಲ್‌ಗಿಂತ ಉತ್ತಮ ಅಭ್ಯರ್ಥಿ ಸಿಗುವುದಿಲ್ಲ. ಅವರದು ಮುಗ್ಧ ಮನಸ್ಸು’ ಎಂದರು.

ಕುಮಾರಸ್ವಾಮಿ– ಡಿ.ಕೆ.ಶಿವಕುಮಾರ್ ಜೋಡೆತ್ತು

‘ಕೆಲವರು ಜೋಡೆತ್ತು ಎಂದು ಹೇಳಿಕೊಂಡು ಅರ್ಧರಾತ್ರಿಯಲ್ಲಿ ರೈತರು ಬೆಳೆದ ಪೈರನ್ನು ತಿಂದು ಹಾಕಲು ಬಂದಿದ್ದಾರೆ. ಪಕ್ಷೇತರ ಅಭ್ಯರ್ಥಿ ಪರ ಪ್ರಚಾರಕ್ಕೆ ನಿಂತಿದ್ದಾರೆ. ಅವರನ್ನು ಯಾರೂ ನಂಬಬಾರದು. ಡಿ.ಕೆ.ಶಿವಕುಮಾರ್‌ ಹಾಗೂ ನಾನು ನಿಜವಾದ ಜೋಡೆತ್ತುಗಳು. ರೈತರ ಜಮೀನು ಹಸಿರುಮಯಗೊಳಿಸಲು ನಿಂತಿರುವ ನಾವೇ ನಿಜವಾದ ಜೋಡೆತ್ತು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ನಟರಾದ ದರ್ಶನ್‌, ಯಶ್ ಹೆಸರು ಹೇಳದೆ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.