ADVERTISEMENT

ಯಾವುದೇ ಪಕ್ಷ ಸೇರುವ ಪ್ರಸ್ತಾವ ಇಲ್ಲ: ಸಂಸದೆ ಸುಮಲತಾ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 11:21 IST
Last Updated 28 ಏಪ್ರಿಲ್ 2022, 11:21 IST
ಸುಮಲತಾ
ಸುಮಲತಾ   

ಮಂಡ್ಯ: ‘ಯಾವುದೇ ಪಕ್ಷ ಸೇರುವ ಪ್ರಸ್ತಾವ ನನ್ನ ಮುಂದಿಲ್ಲ, ಅಂತಹ ಪ್ರಸ್ತಾವ ಬಂದರೆ ಜನಾಭಿಪ್ರಾಯ ಸಂಗ್ರಹ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಸಂಸದೆ ಸುಮಲತಾ ಗುರುವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸದ್ಯಕ್ಕೆ ಯಾವುದೇ ಪಕ್ಷ ಸೇರುವ ಅವಶ್ಯಕತೆ ಇಲ್ಲ. ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬಿಜೆಪಿ ಸೇರುತ್ತಿದ್ದೇನೆ ಎಂದು ನಾನು ಎಲ್ಲೂ ಹೇಳಿಲ್ಲ. ಅಭಿವೃದ್ಧಿಯ ವಿಚಾರವಾಗಿ ಮಾತ್ರ ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದೇನೆಯೇ ಹೊರತು ಪಕ್ಷ ಸೇರ್ಪಡೆ ವಿಚಾರ ಮಾತನಾಡಲು ಅಲ್ಲ’ ಎಂದರು.

‘ನನ್ನ ಬೆಂಬಲಿಗರು ಬಿಜೆಪಿ ಸೇರಿದ ಮಾತ್ರಕ್ಕೆ ನಾನೂ ಬಿಜೆಪಿ ಸೇರುತ್ತಿದ್ದೇನೆ ಎಂದು ಬಿಂಬಿಸಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಎಲ್ಲಾ ಪಕ್ಷಗಳ ಮುಖಂಡರು ನನ್ನನ್ನು ಬೆಂಬಲಿಸಿದ್ದಾರೆ, ನನ್ನ ಗೆಲುವಿಗಾಗಿ ದುಡಿದಿದ್ದಾರೆ. ಅವರು ಸರ್ವ ಸ್ವತಂತ್ರರಾಗಿದ್ದು ಯಾವುದೇ ಪಕ್ಷ ಸೇರಬಹುದು. ನನ್ನ ಪುತ್ರ ಅಭಿಷೇಕ್‌ ಚುನಾವಣೆಗೆ ಸ್ಪರ್ಧಿಸುವ ವಿಚಾರ ಅವನಿಗೆ ಬಿಟ್ಟಿದ್ದು, ಅದು ಅವನ ವೈಯಕ್ತಿಕ ವಿಚಾರ. ಈ ಬಗ್ಗೆ ನಾನು ಏನೂ ಹೇಳುವುದಿಲ್ಲ’ ಎಂದರು.

ADVERTISEMENT

ಬಾಲಿವುಡ್‌ ನಟ ಅಜಯ್‌ ದೇವಗನ್‌ ಟ್ವೀಟ್‌ ಕುರಿತು ಮಾತನಾಡಿದ ಅವರು ‘ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಇದೆ. ನಮ್ಮ ಭಾಷೆಗೆ ಧಕ್ಕೆಯಾದರೆ ಯಾರೂ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಉತ್ತರ ಭಾರತದಲ್ಲಿ ಹಿಂದಿಗೆ ಪ್ರಾಮುಖ್ಯತೆ ಇದೆ, ಅದರಂತೆ ಕರ್ನಾಟಕದಲ್ಲಿ ಕನ್ನಡವೇ ಮುಖ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.