ADVERTISEMENT

ಮಂಡ್ಯ ಗೊಂದಲ: ಪ್ರಾದೇಶಿಕ ಆಯುಕ್ತರಿಂದ ವಿಚಾರಣೆ

ಮೂವರು ಜಿಲ್ಲಾಧಿಕಾರಿಗಳ ದಿಢೀರ್‌ ಎತ್ತಂಗಡಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 19:25 IST
Last Updated 30 ಮಾರ್ಚ್ 2019, 19:25 IST
   

ಬೆಂಗಳೂರು: ಮಂಡ್ಯ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಎನ್‌. ಮಂಜುಶ್ರೀ ಅವರುಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪದ ಕುರಿತು ವಿಚಾರಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಪರಿಶೀಲನೆ, ಅನುಮೋದನೆ ವಿಚಾರದಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಶನಿವಾರ ಮಂಡ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

‘ಜಿಲ್ಲಾ ಚುನಾವಣಾಧಿಕಾರಿ ನಾಮಪತ್ರ ಪರಿಶೀಲಿಸಿ, ಅನುಮೋದನೆ ಮಾಡಿದ ಬಳಿಕ ಅದನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಏನೇ ಆಕ್ಷೇಪಣೆ ಇದ್ದರೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು’ ಎಂದರು.

ADVERTISEMENT

ನಿಖಿಲ್ ಸಲ್ಲಿಸಿದ್ದ ನಾಮಪತ್ರ ಸಮರ್ಪಕವಾಗಿ ಇರಲಿಲ್ಲ ಎಂದು ಆರೋಪಿಸಿದ್ದ ಸುಮಲತಾ ಬೆಂಬಲಿಗರು, ಸಿಂಧುಗೊಳಿಸದಂತೆ ಒತ್ತಾಯಿಸಿದ್ದರು. ಅಭ್ಯರ್ಥಿಗಳ ಪಟ್ಟಿ ತಯಾರಿಕೆ, ಸಂಖ್ಯೆ, ಚಿಹ್ನೆ ನೀಡುವಲ್ಲೂ ನಿಯಮ ಪಾಲನೆಯಾಗಿಲ್ಲ ಎಂದು ಆಕ್ಷೇಪಿಸಿದ್ದರು. ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದೂರನ್ನೂ ನೀಡಿದ್ದರು.

ಮೂವರು ಜಿಲ್ಲಾಧಿಕಾರಿಗಳ ದಿಢೀರ್‌ ಎತ್ತಂಗಡಿ

ಹಾಸನ ಜಿಲ್ಲಾಧಿಕಾರಿ ಅಕ್ರಂ ಪಾಷಾ, ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಬೆಳಗಾವಿ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಅವರನ್ನು ಚುನಾವಣಾ ಆಯೋಗ ದಿಢೀರ್‌ ಎತ್ತಂಗಡಿ ಮಾಡಿದೆ. ಹಾಸನಕ್ಕೆ ಪ್ರಿಯಾಂಕ ಮೇರಿ ಫ್ರಾನ್ಸಿಸ್, ವಿಜಯಪುರಕ್ಕೆ ಎಂ. ಕನಗವಲ್ಲಿ, ಬೆಳಗಾವಿಗೆ ಉಜ್ವಲ್‌ ಕುಮಾರ್ ಘೋಷ್‌ ಅವರನ್ನು ನೇಮಿಸಲಾಗಿದೆ.

‘ಅಕ್ರಂ ಅವರ ಅತ್ತೆಯ ಮನೆ ಹಾಸನ. ಅವರಿಗೆ ರಾಜಕೀಯ ಪಕ್ಷದಒಡನಾಟವಿರುವುದರಿಂದ ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಡೆಸುವುದು ಅನುಮಾನ’ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಆಯೋಗಕ್ಕೆ ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.