ADVERTISEMENT

ನೋವಿನಿಂದ ನರಳುತ್ತಿದೆ ಅತ್ಯಾಚಾರ ಸಂತ್ರಸ್ತ ಮಗು

ಗುಪ್ತಾಂಗದ ಗಾಯ ಉಲ್ಬಣ, ತಿರುಗಿ ನೋಡದ ಜಿಲ್ಲಾಡಳಿತ

ಎಂ.ಎನ್.ಯೋಗೇಶ್‌
Published 8 ಜನವರಿ 2020, 20:00 IST
Last Updated 8 ಜನವರಿ 2020, 20:00 IST
   

ಮಂಡ್ಯ: ಅತ್ಯಾಚಾರ ಸಂತ್ರಸ್ತ ಮೂರೂವರೆ ವರ್ಷದ ಮಗುವಿನ ಗುಪ್ತಾಂಗದಲ್ಲಿ ಆಗಿದ್ದ ಗಾಯ ಉಲ್ಬಣಗೊಂಡಿದ್ದು, ಆಕೆಯ ಪ್ರಾಣ ಉಳಿಸಿಕೊಳ್ಳಲು ಪೋಷಕರು ಪರದಾಡುತ್ತಿದ್ದಾರೆ. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೇವಲ ₹ 10 ಸಾವಿರ ನೀಡಿ ಕೈತೊಳೆದುಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ನಾಗಮಂಗಲ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಆ. 21ರಂದು 17 ವರ್ಷದ ಬಾಲಕನೊಬ್ಬ ಮಗುವಿಗೆ ಚಾಕೋಲೆಟ್‌ ಆಸೆ ತೋರಿಸಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಮಗುವಿನ ಗುಪ್ತಾಂಗದಲ್ಲಿ ಗಾಯವಾಗಿ ರಕ್ತಸ್ರಾವ ಉಂಟಾಗಿತ್ತು. ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಿ ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸಲಾಗಿತ್ತು.

15 ದಿನಗಳ ಚಿಕಿತ್ಸೆ ನಂತರ ಮಗುವನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, ಗಾಯ ಮಾಗದ ಕಾರಣ ಮೂತ್ರದಲ್ಲಿ ಸೋಂಕಾಗಿ ಸ್ಥಿತಿ ಗಂಭೀರಗೊಂಡಿತ್ತು. ಪೋಷಕರು ಮಗು ವನ್ನು ಆಸ್ಪತ್ರೆಗೆ ದಾಖಲು ಮಾಡಿ ಮತ್ತೆ 20 ದಿನಗಳವರೆಗೆ ಚಿಕಿತ್ಸೆ ಕೊಡಿಸಿದ್ದರು.

ADVERTISEMENT

ಪೋಷಕರು ಹಣವಿಲ್ಲದೇ ಪರದಾಡುತ್ತಿರುವ ವಿಚಾರ ತಿಳಿದ ಜನವಾದಿ ಮಹಿಳಾ ಸಂಘಟನೆ ಸದಸ್ಯರು ತಿಂಗಳ ಹಿಂದೆ ನಾಗಮಂಗಲದ ತಹಶೀಲ್ದಾರ್‌, ಮಂಡ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎದುರು ಪ್ರತಿಭಟನೆ ಮಾಡಿ ಪರಿಹಾರ ನೀಡುವಂತೆ ಒತ್ತಾಯಿ ಸಿದ್ದರ ಫಲವಾಗಿ ಇಲಾಖೆ ಅಧಿಕಾರಿಗಳು ಅಲ್ಪ ಹಣ ನೀಡಿದ್ದರು.

‘ಗಾಯ ಮಾಗದೇ ಮಗಳುಇಂದಿಗೂ ನೋವಿನಿಂದ ನರಳುತ್ತಿದ್ದಾಳೆ. ರಕ್ತಸ್ರಾವವಾಗುತ್ತಿದ್ದು, ಯಾವ ಸಮಯದಲ್ಲಿ ಏನಾಗುತ್ತದೋ ಗೊತ್ತಿಲ್ಲ. 5 ತಿಂಗಳಿಂದ ಜ್ವರ ನಿಂತೇ ಇಲ್ಲ. ಅರ್ಧರಾತ್ರಿಯಲ್ಲಿ ಚೀರುತ್ತಾ ಮೇಲೇಳುತ್ತಾಳೆ. ಅತ್ಯಾಚಾರ ಎಸಗಿ ದವನ ಹೆಸರು ಕನವರಿಸುತ್ತಾಳೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಪ್ರಾಣ ಉಳಿಸಿಕೊಂಡಿದ್ದೇವೆ. ನಮಗೆ ಯಾವ ಸಹಾಯವೂ ಸಿಗಲಿಲ್ಲ’ ಎಂದು ಸಂತ್ರಸ್ತ ಮಗುವಿನ ತಾಯಿ ಕಣ್ಣೀರಿಟ್ಟರು.

ಮೂರೇ ದಿನಕ್ಕೇ ಬೇಲ್‌: ನಾಗಮಂಗಲ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿ ಪೋಕ್ಸೊ ಅಡಿ ಪ್ರಕರಣ ದಾಖಲಿಸಿದ್ದರು. ಆದರೆ, ನ್ಯಾಯಾಲಯ ಆರೋಪಿಗೆ ಮೂರೇ ದಿನಕ್ಕೆ (ಆ.25) ಜಾಮೀನು ಮಂಜೂರು ಮಾಡಿತು. ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿ ಕಾರಿಗಳು ಸಮರ್ಪಕ ಸಾಕ್ಷ್ಯ ಒದಗಿಸದ ಕಾರಣ ಕೋರ್ಟ್‌ ಜಾಮೀನು ನೀಡಿದೆ ಎಂದು ಹೋರಾಟಗಾರರು ಆರೋಪಿಸುತ್ತಾರೆ.

‘ಆರೋಪಿ ತಪ್ಪು ಒಪ್ಪಿಕೊಂಡಿ ದ್ದಾನೆ. ಜಾಮೀನು ಪಡೆದು ಈಗ ರಾಜಾರೋಷವಾಗಿ ಓಡಾಡುತ್ತಿದ್ದಾನೆ. ನಿರ್ಭಯಾ ಪ್ರಕರಣದ ನಂತರ ಸಂತ್ರಸ್ತೆಗೆ ಪುನರ್ವಸತಿ ಕಲ್ಪಿಸಬೇಕು, ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸಬೇಕು, ಪರಿಹಾರ ನೀಡಬೇಕು. ಆದರೆ, ಅಧಿ ಕಾರಿಗಳು, ಸಾಂತ್ವನ ಕೇಂದ್ರದ ಸದಸ್ಯರು ಮಗುವಿಗೆ ಕನಿಷ್ಠ ಕೌನ್ಸೆಲಿಂಗ್‌ ಕೂಡ ಮಾಡಿಲ್ಲ. ಮಗುವಿಗೆ ನ್ಯಾಯ ದೊರೆಯುವವರೆಗೂ ನಾವು ಹೋರಾಟ ಮಾಡುತ್ತೇವೆ’ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ದೇವಿ ಹೇಳಿದರು.

ಕ್ರಮದ ಭರವಸೆ: ‘ಮಗುವಿನ ಚಿಕಿತ್ಸಾ ವೆಚ್ಚ ಭರಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಸದ್ಯ, ಆರೋಪಿಗೆ ಜಾಮೀನು ಸಿಕ್ಕಿದೆ. ಮೇಲ್ಮನವಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಪ್ರತಿಕ್ರಿಯಿಸಿ ದರು.

ವಾರದಲ್ಲಿ ಇಬ್ಬರು ಮಕ್ಕಳ ಮೇಲೆ ಅತ್ಯಾಚಾರ

‘ನಾಗಮಂಗಲ ತಾಲ್ಲೂಕಿನಲ್ಲಿ ಜೂನ್‌ ತಿಂಗಳಲ್ಲಿ ಇಬ್ಬರು ಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ. ಎಷ್ಟೋ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿಲ್ಲ. ಪೊಲೀಸರು, ಅಧಿಕಾರಿಗಳು ರಾಜಿ, ಪಂಚಾಯ್ತಿ ಮಾಡಿಸಿ ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ಭ್ರೂಣಹತ್ಯೆ, ಬಾಲ್ಯವಿವಾಹದಲ್ಲೂ ಮಂಡ್ಯ ಜಿಲ್ಲೆ ಮುಂದಿದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.