ADVERTISEMENT

ಮಂಗಳೂರು ದಸರಾ: ವೈಭವದ ಶೋಭಾಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 14:28 IST
Last Updated 19 ಅಕ್ಟೋಬರ್ 2018, 14:28 IST
   

ಮಂಗಳೂರು: ವರ್ಣಮಯವಾಗಿ ಕಂಗೊಳಿಸಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಶೋಭಾಯಾತ್ರೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಕ್ಷೇತ್ರದ ನವೀಕರಣದ ರೂವಾರಿ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗ ದರ್ಶನದಲ್ಲಿ ಶುಕ್ರವಾರ ಸಂಜೆ ಆರಂಭಗೊಂಡಿತು.

ಕ್ಷೇತ್ರದಿಂದ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶಾರದಾ ಮಾತೆ, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹಗಳ ಸಹಿತ ವರ್ಣರಂಜಿತ ದಸರಾ ಮೆರವಣಿಗೆ ಹೊರಟು, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್‌ ಸರ್ಕಲ್‌, ಲಾಲ್‌ಬಾಗ್‌, ಬಲ್ಲಾಳ್‌ಬಾಗ್‌, ಪಿವಿಎಸ್‌ ಸರ್ಕಲ್‌, ಕೆ.ಎಸ್‌. ರಾವ್‌ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್‌ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್‌, ಅಳಕೆಯಾಗಿ ಮತ್ತೆ ಶ್ರೀ ಕ್ಷೇತ್ರಕ್ಕೆ ತಲುಪಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 9 ಕಿ.ಮೀ. ಸಾಗಲಿರುವ ಶೋಭಾಯಾತ್ರೆಯನ್ನು ವೀಕ್ಷಿಸಲು ಸಾವಿರಾರು ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದಾರೆ.

ಮಂಗಳೂರು ದಸರಾದ ಶೋಭಾಯಾತ್ರೆಗೆ ವಿವಿಧ ಸಂಘ-ಸಂಸ್ಥೆಗಳ ಧಾರ್ಮಿಕ-ಸಾಂಸ್ಕೃತಿಕ ಸ್ತಬ್ಧಚಿತ್ರ, ಹುಲಿ ವೇಷ, ನೃತ್ಯ ರೂಪಕಗಳು, ದೇಶದ ಪರಂಪರೆಯ ಟ್ಯಾಬ್ಲೋಗಳು, ತ್ರಿಶ್ಶೂರಿನ ಬಣ್ಣದ ಕೊಡೆ, ಚೆಂಡೆ ವಾದ್ಯ, ಕಲ್ಲಡ್ಕ ಗೊಂಬೆ, ಡೊಳ್ಳು ಕುಣಿತ, ಸೋಮನ ಕುಣಿತ, ಪೂಜಾ ಕುಣಿತಗಳು, ರಾಜ್ಯದ ವಿವಿಧ ಸಾಂಸ್ಕೃತಿಕ ಕಲಾತಂಡಗಳು, ವೈವಿಧ್ಯಮಯ 75 ಕ್ಕೂ ಅಧಿಕ ಸ್ತಬ್ಧ ಚಿತ್ರಗಳು, 100ಕ್ಕೂ ಅಧಿಕ ವೇಷ ಭೂಷಣಗಳು, ವಾದ್ಯಮೇಳಗಳ ತಂಡಗಳು ಪಾಲ್ಗೊಂಡಿವೆ.

ADVERTISEMENT

ಎಲ್ಲರಿಗೂ ಈ ಶೋಭಾಯಾತ್ರೆ ವೀಕ್ಷಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಮೆರವಣಿಗೆಯ ಅವಧಿಯನ್ನು 16 ಗಂಟೆಯಿಂದ 12 ಗಂಟೆಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಆರಂಭವಾದ ಶೋಭಾಯಾತ್ರೆ ಶನಿವಾರ ಬೆಳಿಗ್ಗೆ 4 ಗಂಟೆಗೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.