ADVERTISEMENT

ಮಂಗಳೂರು ಗೋಲಿಬಾರ್‌ ಪ್ರಕರಣ: ಪೊಲೀಸ್ ಕಮಿಷನರ್‌‌ಗೆ ನೋಟಿಸ್‌ ಜಾರಿ

ಡಿ.19ರ ಗೋಲಿಬಾರ್‌ ಪ್ರಕರಣದ ಮ್ಯಾಜಿಸ್ಟೀರಯಲ್‌ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 13:46 IST
Last Updated 4 ಮಾರ್ಚ್ 2020, 13:46 IST
ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ
ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ   

ಮಂಗಳೂರು: ಡಿಸೆಂಬರ್‌ 19ರಂದು ನಗರದಲ್ಲಿ ನಡೆದ ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 12ರಂದು ಮ್ಯಾಜಿಸ್ಟೀರಿಯಲ್‌ ವಿಚಾರಣೆಗೆ ಹಾಜರಾಗುವಂತೆ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರಿಗೆ ವಿಚಾರಣಾಧಿಕಾರಿ ಜಿ.ಜಗದೀಶ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಬುಧವಾರ ವಿಚಾರಣಾ ಕಲಾಪ ಪೂರ್ಣಗೊಳಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಜಗದೀಶ್‌, ‘ಮಾರ್ಚ್‌ 9ರಂದು ವಿಚಾರಣೆಗೆ ಹಾಜರಾಗುವಂತೆ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಗ್ಷು ಗಿರಿ ಅವರಿಗೆ ನೋಟಿಸ್‌ ನೀಡಲಾಗಿದೆ. ಕಮಿಷನರ್‌ ಅವರಿಗೆ ಮಾರ್ಚ್‌ 12ರಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಈ ಎರಡೂ ದಿನ ತಲಾ 40 ಮಂದಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿಚಾರಣೆಯೂ ನಡೆಯಲಿದೆ’ ಎಂದರು.

ಹೈಕೋರ್ಟ್‌ ಆದೇಶದ ಪ್ರಕಾರ, ಮಾರ್ಚ್‌ 23ರೊಳಗೆ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕಿದೆ. 176 ಮಂದಿ ಪೊಲೀಸರ ಹೇಳಿಕೆ ದಾಖಲಿಸಬೇಕಿದೆ. ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸಿ, ನಿಗದಿತ ಕಾಲಮಿತಿಯೊಳಗೆ ವರದಿ ಸಲ್ಲಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ADVERTISEMENT

29 ಮಂದಿಯ ಹೇಳಿಕೆ ದಾಖಲು: ಈ ಹಿಂದೆ ಎರಡು ಬಾರಿ ಯಾವುದೇ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ವಿಚಾರಣೆಗೆ ಹಾಜರಾಗಿರಲಿಲ್ಲ. ಬುಧವಾರ ವಿಚಾರಣೆಗೆ ಹಾಜರಾಗುವಂತೆ 37 ಮಂದಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಈ ಪೈಕಿ ಎಸಿಪಿಗಳಾದ ಕೋದಂಡರಾಮ, ಕೆ.ಯು.ಬೆಳ್ಳಿಯಪ್ಪ ಸೇರಿದಂತೆ 29 ಮಂದಿ ಹಾಜರಾಗಿ ಸಾಕ್ಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.