ADVERTISEMENT

ಮಾದಕವಸ್ತು ನೀಡಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ; 5 ವಿದ್ಯಾರ್ಥಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 3:59 IST
Last Updated 4 ಜುಲೈ 2019, 3:59 IST
   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ಅದೇ ಕಾಲೇಜಿನ‌ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಸಂಬಂಧ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲ್ಲೂಕಿನ ಬಜತ್ತೂರು ಗ್ರಾಮದ ಗಾಣದಮನೆ ನಿವಾಸಿ ಗುರುನಂದನ್ (19), ಬಂಟ್ವಾಳ ತಾಲ್ಲೂಕಿನ ಪೆರ್ನೆ ನಿವಾಸಿಗಳಾದ ಪ್ರಜ್ವಲ್ (19) ಮತ್ತು ಕಿಶನ್ (19), ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಪಿಲಿಗುಂಡ ನಿವಾಸಿ ಸುನೀಲ್ (19) ಹಾಗೂ ಬಂಟ್ವಾಳ ತಾಲ್ಲೂಕಿನ ಬರಿಮಾರು ಗ್ರಾಮದ ಬಲ್ಯ ನಿವಾಸಿ ಪ್ರಖ್ಯಾತ್ (19) ಎಂಬ ವಿದ್ಯಾರ್ಥಿಗಳನ್ನು ಬುಧವಾರ ಪುತ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿನಿ ಮತ್ತು ಆರೋಪಿಗಳು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಸಂತ್ರಸ್ತೆಗೆ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಕೃತ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಕೆಲವು ದಿನಗಳಿಂದ ಈ ಘಟನೆಗೆ ಸಂಬಂಧಿಸಿದ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಘಟನೆ ಇದೇ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ನಡೆದಿದೆ ಎನ್ನಲಾಗಿದೆ.

ADVERTISEMENT

'ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ವಿಡಿಯೊ ಆಧರಿಸಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ' ಎಂದು ದಕ್ಷಿಣ ಕನ್ನಡ ಎಸ್ ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಬಾಬು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೊ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವವರು ಮತ್ತು ಸಂಗ್ರಹಿಸಿ ಇಟ್ಟುಕೊಳ್ಳುವವರ ವಿರುದ್ಧ ಕ್ರಮ‌ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.