ADVERTISEMENT

ಮಂಗಳೂರು: ಕೋಡಿ, ಆಝಾದ್‌ ನಗರ ಸ್ವಯಂಪ್ರೇರಿತ ಸೀಲ್‌ಡೌನ್‌

ವ್ಯಾಪಾರಿಗಳು, ಚಾಲಕರಿಗೆ ನಗರಸಭೆಯಿಂದ ಕೋವಿಡ್‌ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 16:09 IST
Last Updated 27 ಜೂನ್ 2020, 16:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಕೋವಿಡ್‌–19 ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ಸ್ಥಳೀಯರ ತೀರ್ಮಾನದಂತೆ ಉಳ್ಳಾಲ ನಗರಸಭೆ ವ್ಯಾಪ್ತಿಯ ಕೋಡಿ ಮತ್ತು ಆಝಾದ್‌ ನಗರ ಪ್ರದೇಶಗಳಲ್ಲಿ ಸ್ವಯಂಪ್ರೇರಿತ ಸೀಲ್‌ಡೌನ್‌ ಜಾರಿ ಮಾಡಲಾಗಿದೆ ಎಂದು ಸ್ಥಳೀಯ ಶಾಸಕ ಯು.ಟಿ.ಖಾದರ್‌ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ‘ಸೀಲ್‌ಡೌನ್‌ ಮಾಡುವ ನಿರ್ಧಾರವನ್ನು ಸ್ಥಳೀಯ ಮುಖಂಡರು, ಧಾರ್ಮಿಕ ಮುಖಂಡರು ಮತ್ತು ಸಾರ್ವಜನಿಕರು ಸೇರಿ ಕೈಗೊಂಡಿದ್ದಾರೆ. ಈ ‍ಪ್ರದೇಶಗಳಲ್ಲಿ ಅನಗತ್ಯವಾಗಿ ಯಾರೂ ಓಡಾಡಲು ಅವಕಾಶವಿಲ್ಲ. ಅನಿವಾರ್ಯ ಕಾರಣಗಳಿದ್ದರೆ ಮತ್ತು ದುಡಿಯುವ ಜನರು ಮಾತ್ರ ಹೊರಗೆ ಹೋಗಿ, ಬರಬಹುದು. ಸ್ಥಳೀಯ ಜನರೇ ಪಹರೆ ಕಾಯುತ್ತಾರೆ’ ಎಂದರು.

ಉಳ್ಳಾಲ ನಗರಸಭೆಯ ವ್ಯಾಪ್ತಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಲು ನಿರ್ಧರಿಸಲಾಗಿದೆ. ಶನಿವಾರದಿಂದಲೇ ಈ ಕೆಲಸ ಆರಂಭವಾಗಿದೆ. ಸೋಮವಾರ ಸಂಜೆಯ ವೇಳೆಗೆ ಸ್ಯಾನಿಟೈಸ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಶಾಸಕರು ತಿಳಿಸಿದರು.

ADVERTISEMENT

ಕೋವಿಡ್‌ ಪರೀಕ್ಷೆಗೆ ವ್ಯವಸ್ಥೆ:

ನಗರಸಭೆ ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪಾರಿಗಳು, ರಿಕ್ಷಾ, ಬಾಡಿಗೆ ಟ್ಯಾಕ್ಸಿ, ಸರಕು ಸಾಗಣೆ ವಾಹನಗಳ ಚಾಲಕರಿಗೆ ಉಚಿತವಾಗಿ ಕೋವಿಡ್‌–19 ಸೋಂಕು ಪತ್ತೆ ಪರೀಕ್ಷೆ ಮಾಡಿಸಲಾಗುವುದು. ಸೋಮವಾರದಿಂದ ಮಾದರಿ ಸಂಗ್ರಹಿಸಲಾಗುವುದು ಎಂದು ಹೇಳಿದರು.

ಕೋಡಿ ಮತ್ತು ಕೋಟೆಪುರ ಪ್ರದೇಶದಲ್ಲಿ ಜನರನ್ನು ಆಯ್ದು (ರ‍್ಯಾಂಡಮ್‌) ಕೋವಿಡ್‌–19 ಪರೀಕ್ಷೆ ಮಾಡಿಸಬೇಕೆಂಬ ಬೇಡಿಕೆ ಬಂದಿದೆ. ನಗರಸಭೆಯ ಅಧಿಕಾರಿಗಳು ಸಿದ್ಧತೆ ಆರಂಭಿಸಿದ್ದು, ಶೀಘ್ರದಲ್ಲಿ ಪರೀಕ್ಷೆ ನಡೆಸಲಾಗುವುದು. ಕೆಮ್ಮು, ಜ್ವರ, ಶೀತ ಇರುವವರು ಮತ್ತು ಸೋಂಕಿತರ ಸಂಪರ್ಕಕ್ಕೆ ಬಂದವರು ಸ್ವಯಂಪ್ರೇರಿತರಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಖಾದರ್‌ ಮನವಿ ಮಾಡಿದರು.

ಕ್ವಾರಂಟೈನ್‌ಗೆ ಆಗ್ರಹ:

ಹೊರ ರಾಜ್ಯಗಳಿಂದ ಸರಕು ಹೊತ್ತು ತರುವ ಲಾರಿಗಳ ಚಾಲಕರನ್ನು ಕ್ವಾರಂಟೈನ್‌ ಮಾಡುತ್ತಿಲ್ಲ. ಇದರಿಂದಾಗಿ ಸೋಂಕು ಹಬ್ಬುವ ಭೀತಿ ಇದೆ. ಅಂತರ ರಾಜ್ಯ ಪ್ರಯಾಣ ಮಾಡುವ ಚಾಲಕರಿಗೆ ಕ್ವಾರಂಟೈನ್‌ ಕಡ್ಡಾಯ ಮಾಡಬೇಕು. ಕೋವಿಡ್‌–19 ಪರೀಕ್ಷೆ ವರದಿ ಬಂದ 48 ಗಂಟೆಗಳವರೆಗೆ ಮಾತ್ರ ಅವರಿಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮುಂದಿನ ದಿನಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ. ಅದನ್ನು ಎದುರಿಸುವುದಕ್ಕಾಗಿ ಸರ್ಕಾರೇತರ ಸಂಘ, ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ತುರ್ತಾಗಿ ಸಭೆ ನಡೆಸಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.