ADVERTISEMENT

ಮಂಗಳೂರು ಸ್ಫೋಟ ಪ್ರಕರಣ: ಎನ್‌ಐಎ, ಇ.ಡಿ ಭಿನ್ನ ಮಾಹಿತಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 15:46 IST
Last Updated 7 ಆಗಸ್ಟ್ 2025, 15:46 IST
<div class="paragraphs"><p>ಸ್ಫೋಟ</p></div>

ಸ್ಫೋಟ

   

ಬೆಂಗಳೂರು: ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ), ‘ಕದ್ರಿ ಮಂಜುನಾಥ ದೇವಾಲಯ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು’ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು. ಆದರೆ, ಜಾರಿ ನಿರ್ದೇಶನಾಲಯವು (ಇ.ಡಿ), ‘ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು’ ಎಂದಿದೆ. ಎರಡೂ ತನಿಖಾ ಸಂಸ್ಥೆಗಳ ವಿವರಗಳಲ್ಲಿನ ವ್ಯತ್ಯಾಸ ಚರ್ಚೆಗೆ ಕಾರಣವಾಗಿದೆ.

2022ರ ನವೆಂಬರ್‌ನಲ್ಲಿ ಮಂಗಳೂರಿನ ಆಟೋ ಒಂದರಲ್ಲಿ ಸ್ಫೋಟ ಸಂಭವಿಸಿತ್ತು. ಕುಕ್ಕರ್‌ ಬಾಂಬ್‌ನಿಂದ ಸ್ಫೋಟ ಸಂಭವಿಸಿದೆ ಎಂಬುದು ತನಿಖೆಯಿಂದ ಗೊತ್ತಾಗಿತ್ತು. ಎನ್‌ಐಎ ತನಿಖೆ ಕೈಗೆತ್ತಿಕೊಂಡಿತ್ತು

ADVERTISEMENT

2023ರ ಡಿಸೆಂಬರ್‌ನಲ್ಲಿ ಎನ್‌ಐಎ ಆರೋಪ ಪಟ್ಟಿ ಸಲ್ಲಿಸಿತ್ತು. ‘ಮಂಗಳೂರಿನ ಕದ್ರಿಯ ಮಂಜುನಾಥಸ್ವಾಮಿ ದೇವಾಲಯವನ್ನು ಸ್ಫೋಟಿಸಲು ಸಂಚು ರೂಪಿಸಲಾಗಿತ್ತು. ಆದರೆ, ಆಪಾದಿತ ಮೊಹಮ್ಮದ್ ಶಾರಿಕ್‌ ಬಾಂಬ್‌ನ ಟೈಮರ್‌ ಅನ್ನು 9.0 ನಿಮಿಷಕ್ಕೆ ನಿಗದಿ ಮಾಡುವ ಬದಲಿಗೆ, 9.0 ಸೆಕೆಂಡ್‌ಗೆ ನಿಗದಿ ಮಾಡಿದ್ದ. ಹೀಗಾಗಿ ಆಟೊದಲ್ಲೇ ಕುಕ್ಕರ್ ಬಾಂಬ್‌ ಸ್ಫೋಟಗೊಂಡಿತ್ತು’ ಎಂದು ಎನ್‌ಐಎ ಹೇಳಿತ್ತು.

ಜತೆಗೆ, ‘ಪ್ರೇಮರಾಜ್‌ ಎಂದು ಹೆಸರು ಬದಲಿಸಿದ್ದ ಶಾರಿಕ್‌ ಚಿಕ್ಕಬಳ್ಳಾಪುರದ ಇಶಾ ಫೌಂಡೇಷನ್‌, ಕನ್ಯಾಕುಮಾರಿಯ ವಿವೇಕಾನಂದ ಪ್ರತಿಮೆ, ವೆಲ್ಲೂರಿನ ದೇವಾಲಯ ಮತ್ತು ಕದ್ರಿಯ ಮಂಜುನಾಥ ದೇವಾಲಯಕ್ಕೂ ಭೇಟಿ ನೀಡಿದ್ದ’ ಎಂದು ವಿವರಿಸಿತ್ತು.

ಕೇಂದ್ರದ ಎರಡು ತನಿಖಾ ಸಂಸ್ಥೆಗಳು ಒಂದೇ ಪ್ರಕರಣದ ವಿಚಾರದಲ್ಲಿ ಎರಡು ಭಿನ್ನ ದೇವಾಲಯಗಳ ಹೆಸರನ್ನು ಏಕೆ ಉಲ್ಲೇಖಿಸಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.