ADVERTISEMENT

ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ಮಂಗಳೂರಿನಲ್ಲೂ ಇ.ಡಿಯಿಂದ ಶೋಧ

ಪಿಟಿಐ
Published 11 ಜನವರಿ 2023, 19:45 IST
Last Updated 11 ಜನವರಿ 2023, 19:45 IST
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ   

ನವದೆಹಲಿ: ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ನಡೆದ ಕುಕ್ಕರ್ ಬಾಂಬ್‌ ಸ್ಫೋಟ ಪ್ರಕರಣ ಹಾಗೂ ಹಣದ ಅಕ್ರಮ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯವು (ಇಡಿ) ಮಂಗಳೂರಿನ ಕೆಲವು ಪ್ರದೇಶಗಳಲ್ಲಿ ಬುಧವಾರ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಖಲಿಸಿದ ಎಫ್‌ಐಆರ್ ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಹಣದ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್‌ ಸೆಕ್ಷನ್‌ಗಳಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಗೂ ಸಾಕ್ಷ್ಯಗಳನ್ನು ಕಲೆ ಹಾಕುವ ಸಲುವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್‌ ಪಕ್ಷದ ಕಚೇರಿ ಇರುವ ಪ್ರದೇಶವೂ ಸೇರಿದಂತೆ ಅನೇಕ ಕಡೆ ದಾಳಿ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ಕಟ್ಟಡವೊಂದರಲ್ಲಿರುವ ಕಚೇರಿಯಲ್ಲಿ ಕೇವಲ ಶೋಧ ನಡೆಸಲಾಗಿದೆ. ರಾಜಕೀಯ ಪಕ್ಷದ ಕಚೇರಿಯ ಆವರಣದಲ್ಲಿ ಯಾವುದೇ ದಾಳಿಯನ್ನು ಸಂಘಟಿಸಿಲ್ಲ. ಇತರ ಕೆಲವು ಕಡೆಗಳಲ್ಲೂ ಶೋಧ ನಡೆಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

ಮಂಗಳೂರಿನ ಹೊರವಲಯದಲ್ಲಿ ಆಟೊರಿಕ್ಷಾದಲ್ಲಿ ಮೊಹಮ್ಮದ್‌ ಶಾರಿಕ್‌ ಸ್ಫೋಟಕಗಳನ್ನು ಸಾಗಿಸುವಾಗ 2022ರ ನ.19ರಂದು ಸ್ಫೋಟ ಸಂಭವಿಸಿತ್ತು.

ಪೊಲೀಸ್‌ ಮೂಲಗಳ ಪ್ರಕಾರ, ಆರೋಪಿ ಶಾರಿಕ್‌ ಹಾಗೂ ಸಹವರ್ತಿಗಳು ಭಯೋತ್ಪಾದಕ ‌ಸಂಘಟನೆಯಾದ ಇಸ್ಲಾಮಿಕ್‌ ಸ್ಟೇಟ್‌ನಿಂದ ಪ್ರೇರಿತರಾಗಿ ಈ ಕೃತ್ಯ ನಡೆಸಿದ್ದರು. ಟೆಲಿಗ್ರಾಂ ಮೆಸೇಜಿಂಗ್‌ ಆ್ಯಪ್‌ ಮೂಲಕ ಸಂಪರ್ಕ ಸಾಧಿಸುತ್ತಿದ್ದರು. ದೇಶದಿಂದ ಹೊರಗಿದ್ದುಕೊಂಡು ಅವರಿಗೆ ನಿರ್ದೇಶನ ನೀಡುತ್ತಿದ್ದವರು ಬಾಂಬ್‌ ತಯಾರಿಸುವ ಕುರಿತ ಮಾಹಿತಿಗಳಿರುವ ದಾಖಲೆಗಳನ್ನು ಅವರಿಗೆ ಕಳುಹಿಸಿಕೊಟ್ಟಿದ್ದರು. ಅದನ್ನು ಬಳಸಿ ಅವರು ಬಾಂಬ್‌ ತಯಾರಿಸಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ ನದಿಯ ತಟದಲ್ಲಿ ಪ್ರಯೋಗಾರ್ಥ ಬಾಂಬ್‌ ಸ್ಫೋಟಿಸಿದ್ದರು. ಕರ್ನಾಟಕದಾದ್ಯಂತ ಭಾರಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಯೋಜನೆ ಅವರದಾಗಿತ್ತು ಎಂದು ರಾಜ್ಯದ ಪೊಲೀಸ್‌ ಮೂಲಗಳು ತಿಳಿಸಿವೆ.

ಹಿಂದುತ್ವ ಸಿದ್ಧಾಂತದ ಪ್ರತಿಪಾದಕ ವಿ.ಡಿ. ಸಾವರ್ಕರ್‌ ವಿಷಯದಲ್ಲಿ ಶಿವಮೊಗ್ಗದಲ್ಲಿ ಆ. 15ರಂದು ನಡೆದ ಹಿಂಸಾಕೃತ್ಯದ ಬೆನ್ನು ಹತ್ತಿದ್ದ ಪೊಲೀಸರು ಐಎಸ್‌ ಪ್ರೇರಿತ ಭಯೋತ್ಪಾದನಾ ಗುಂಪನ್ನು ಭೇದಿಸಿದ್ದರು. ಆದರೆ ಆರೋಪಿ ಶಾರಿಕ್‌ ಪೊಲೀಸರಿಂದ ತಪ್ಪಿಸಿಕೊಂಡಿದ್ದ.

ಈ ಪ್ರಕರಣವನ್ನು ಬಳಿಕ ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.