ADVERTISEMENT

ಮಂಗಳೂರು ಪ್ರಕರಣ: ದೂರಿನ ಆಧಾರದಲ್ಲಿ ಶಾಸಕರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 23:30 IST
Last Updated 19 ಫೆಬ್ರುವರಿ 2024, 23:30 IST
<div class="paragraphs"><p>ವಿಧಾನಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಮಾತನಾಡಿದರು.</p></div>

ವಿಧಾನಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಮಾತನಾಡಿದರು.

   

ಬೆಂಗಳೂರು: ಶಾಲಾ ಮಕ್ಕಳ ಎದುರು ಪ್ರಚೋದನಾಕಾರಿ ಭಾಷಣ ಮಾಡಿದ್ದ ದೂರಿನ ಅನ್ವಯ ಶಾಸಕರಾದ ವೇದವ್ಯಾಸ ಕಾಮತ್‌, ಭರತ್‌ ಶೆಟ್ಟಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಸಚೇತಕ ಎನ್‌.ರವಿಕುಮಾರ್ ಮತ್ತಿತರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರಿನ ಶಾಲಾ ಶಿಕ್ಷಕಿಯ ಮೇಲಿನ ಆರೋಪ ಕುರಿತು ತನಿಖೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ಈಗಾಗಲೇ ಸಮಿತಿ ರಚಿಸಿದೆ. ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ ತಕ್ಷಣ ಕಳವಳಪಡುವ ಅಗತ್ಯವಿಲ್ಲ. ಶಿಕ್ಷಣ ಇಲಾಖೆ ಹಾಗೂ ಪೊಲೀಸರ ತನಿಖೆಯ ನಂತರ ಸತ್ಯಾಸತ್ಯತೆ ಹೊರಬರಲಿದೆ ಎಂದರು.

ADVERTISEMENT

ಗೃಹ ಸಚಿವರ ಉತ್ತರಕ್ಕೆ ತೃಪ್ತರಾಗದ ಕೋಟ ಶ್ರೀನಿವಾಸ ಪೂಜಾರಿ, ಭಾರತಿ ಶೆಟ್ಟಿ, ರವಿಕುಮಾರ್, ‘ಸರ್ಕಾರಕ್ಕೆ ಇದೆಲ್ಲ ಶೋಭೆ ತರುವುದಿಲ್ಲ. ಬಿಜೆಪಿ ಶಾಸಕರು, ಕಾರ್ಯಕರ್ತರನ್ನೇ ಗುರಿ ಮಾಡಲಾಗುತ್ತಿದೆ. ಬಿಜೆಪಿಯ ಎಲ್ಲ ಶಾಸಕರ ವಿರುದ್ಧ ಎಫ್‌ಐಆರ್‌ ಹಾಕಿಸಿ, ಜೈಲಿಗೆ ಕಳುಹಿಸಿಬಿಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯರು ಬೆಳಗಾವಿ ವಂಟಮುರಿ ದಲಿತ ಮಹಿಳೆ ಪ್ರಕರಣವನ್ನು ಮಣಿಪುರ ಪ್ರಕರಣದ ಜತೆ ಹೋಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪರಮೇಶ್ವರ, ಮಣಿಪುರ ಪ್ರಕರಣವೇ ಬೇರೆ. ರಾಜ್ಯದಲ್ಲಿ ಪ್ರಕರಣ ಪತ್ತೆಯಾದ ತಕ್ಷಣ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಮಹಿಳೆಗೆ ರಕ್ಷಣೆ ನೀಡಲಾಗಿದೆ. ಘಟನೆ ನಡೆದಾಗ ವಿಳಂಬ ಮಾಡಿದ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು. 

ಬಿಜೆಪಿಯ ತಳವಾರ್ ಸಾಬಣ್ಣ ಮಾತನಾಡಿ, ಪೊಲೀಸರ ದಬ್ಬಾಳಿಕೆಗೆ ಮೊದಲು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.