ADVERTISEMENT

Mangaluru | ಕೃಷ್ಣಾಪುರ: ಚೂರಿಯಿಂದ ಇರಿದು ವರ್ತಕನ ಹತ್ಯೆ, ನಿಷೇಧಾಜ್ಞೆ

ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ: ಪೊಲೀಸ್‌ ಕಮಿಷನರ್‌

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2022, 6:37 IST
Last Updated 26 ಡಿಸೆಂಬರ್ 2022, 6:37 IST
ಕೃಷ್ಣಾಪುರದಲ್ಲಿ ಜಲೀಲ್‌ ಅವರಿಗೆ ಚೂರಿ ಇರಿತ ನಡೆದ ಅವರ ಅಂಗಡಿ
ಕೃಷ್ಣಾಪುರದಲ್ಲಿ ಜಲೀಲ್‌ ಅವರಿಗೆ ಚೂರಿ ಇರಿತ ನಡೆದ ಅವರ ಅಂಗಡಿ   

ಸುರತ್ಕಲ್‌ (ದಕ್ಷಿಣ ಕನ್ನಡ): ಸಮೀಪದ ಕೃಷ್ಣಾಪುರದ ದಿನಸಿ ಅಂಗಡಿಗೆ ಶನಿವಾರ ರಾತ್ರಿ ನುಗ್ಗಿದ ದುಷ್ಕರ್ಮಿಗಳು, ವರ್ತಕ ಜಲೀಲ್‌ (42) ಅವರನ್ನು ಹತ್ಯೆಮಾಡಿ ಪರಾರಿಯಾಗಿದ್ದಾರೆ.

ಜಲೀಲ್‌ ಅವರು ಕೃಷ್ಣಾಪುರದ 4ನೇ ಬ್ಲಾಕ್‌ನಲ್ಲಿ ‘ಲತೀಫಾ ಸ್ಟೋರ್‌’ ಎಂಬ ದಿನಸಿ ಅಂಗಡಿಯನ್ನು ನಡೆಸುತ್ತಿದ್ದರು. ಅವರು ವ್ಯಾಪಾರ ನಡೆಸುತ್ತಿದ್ದ ವೇಳೆ ಬಂದ ಇಬ್ಬರು ಏಕಾಏಕಿ ಅವರ ಎದೆಗೆ ಚೂರಿಯಿಂದ ಇರಿದರು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅವರನ್ನು ಅಕ್ಕಪಕ್ಕದ ಅಂಗಡಿಯವರು ಹಾಗೂ ಸ್ಥಳೀಯರು ಸೇರಿ ಮುಕ್ಕದ ಆಸ್ಪತ್ರೆಗೆ ದಾಖಲಿಸಿದರು. ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.

ನಗರ ಪೊಲೀಸ್‌ ಕಮಿನಷರ್‌ ಎನ್‌.ಶಶಿಕುಮಾರ್‌ ಹಾಗೂ ಸುರತ್ಕಲ್‌ ಠಾಣೆಯ ಪೊಲೀಸ್‌ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿದರು. ‌

ADVERTISEMENT

‘ರಾತ್ರಿ 8 ಗಂಟೆ ಸುಮಾರಿಗೆ ಕೃತ್ಯ ನಡೆದಿದೆ. ಕೃತ್ಯ ನಡೆಸಿದ ದುಷ್ಕರ್ಮಿಗಳು ಮುಸುಕು ಧರಿಸಿದ್ದರು. ಹಾಗಾಗಿ ಅವರು ಯಾರೆಂದು ಗೊತ್ತಾಗಿಲ್ಲ. ಕೃತ್ಯಕ್ಕೆ ಬಳಸಿದ್ದ ಚೂರಿಯನ್ನು ಸ್ಥಳದಲ್ಲೇ ಬಿಸಾಡಿ ಹೋಗಿದ್ದಾರೆ. ಯಾವ ಕಾರಣಕ್ಕೆ ಕೊಲೆ ನಡೆಸಲಾಗಿದೆ ಎಂಬುದು ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ’ ಎಂದು ಶಶಿಕುಮಾರ್‌ ತಿಳಿಸಿದರು.

‘ಇದು ಕೋಮು ದ್ವೇಷದಿಂದ ನಡೆದ ಕೊಲೆಯೋ ಅಥವಾ ಕೃತ್ಯಕ್ಕೆ ಬೇರೇನಾದರೂ ಕಾರಣಗಳಿವೆಯೇ ಎಂಬುದನ್ನು ಈಗಲೇ ಹೇಳಲಾಗದು. ವದಂತಿಗಳಿಗೆ ಜನರು ಕಿವಿಗೊಡದೇ ಶಾಂತಿ ಕಾಪಾಡಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಭಾನುವಾರ ಕ್ರಿಸ್ಮಸ್‌ ಆಚರಣೆಗೆ ಇದು ಅನ್ವಯವಾಗದು’ ಎಂದು ಅವರು ತಿಳಿಸಿದರು.

‘ಜಲೀಲ್‌ ಅವರ ಅಂಗಡಿ ಇರುವ ವಾಣಿಜ್ಯ ಸಂಕೀರ್ಣದಲ್ಲಿ ಒಟ್ಟು ಐದು ಅಂಗಡಿಗಳಿವೆ. ಕೃತ್ಯ ನಡೆಯುವಾಗ ಅಕ್ಕ ಪಕ್ಕದ ಅಂಗಡಿಯವರೂ ಇದ್ದರು. ಅವರು ಬಿಡಿಸಲು ತೆರಳುವಷ್ಟರಲ್ಲಿ ದುಷ್ಕರ್ಮಿಗಳು ಚೂರಿ ಇರಿದು ಪರಾರಿಯಾಗಿದ್ದರು’ ಎಂದು ಮೂಲಗಳು ತಿಳಿಸಿವೆ.

ಅವರ ಮೃತದೇಹವನ್ನು ಮುಕ್ಕ ಆಸ್ಪತ್ರೆಯಿಂದ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಜಲೀಲ್‌ ಅವರಿಗೆ ಮದುವೆಯಾಗಿದ್ದು, ಪತ್ನಿ ಜೊತೆ ಕೃಷ್ಣಾಪುರ 9ನೇ ಬ್ಲಾಕ್‌ ಮನೆಯಲ್ಲಿ ನೆಲೆಸಿದ್ದರು. ದಂಪತಿಗೆ ಮಕ್ಕಳಿಲ್ಲ.

ಸಾಂತ್ವನ: ಸ್ಥಳಕ್ಕೆ ಕಾಂಗ್ರೆಸ್‌ ಮುಖಂಡ ಮೊಯ್ದಿನ್ ಬಾವ ಭೇಟಿ ನೀಡಿ ಜಲೀಲ್‌ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.