ADVERTISEMENT

ಮಂಗಳೂರು: ಅಂತರರಾಜ್ಯ ಹಫ್ತಾ ವಸೂಲಿ ತಂಡ ಸೆರೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 8:45 IST
Last Updated 17 ಆಗಸ್ಟ್ 2019, 8:45 IST
   

ಮಂಗಳೂರು: ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ ಅಧಿಕಾರಿಗಳ ಹೆಸರಿನಲ್ಲಿ ಅಂತರರಾಜ್ಯ ಮಟ್ಟದಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದ ತಂಡವೊಂದನ್ನು ಮಂಗಳೂರು ನಗರ ಪೊಲೀಸರು ಶುಕ್ರವಾರ ಸೆರೆ ಹಿಡಿದಿದ್ದಾರೆ.

ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ ಮುಖ್ಯಸ್ಥ ಎಂದು ಹೇಳಿಕೊಳ್ಳುತ್ತಿದ್ದ ಕೇರಳದ ಸ್ಯಾಮ್ ಪೀಟರ್, ಮಂಗಳೂರಿನ ಮೊಹಿದ್ದೀನ್ ಅಲಿಯಾಸ್ ಚೆರಿಯನ್, ಅಬ್ದುಲ್ ಲತೀಫ್, ಅಂಗ ರಕ್ಷಕರ ವೇಷದಲ್ಲಿದ್ದ ಮಡಿಕೇರಿಯ ಟಿ.ಕೆ.ಬೋಪಣ್ಣ, ವಿರಾಜಪೇಟೆಯ ಚಿನ್ನಪ್ಪ, ಬೆಂಗಳೂರಿನ ನೀಲಸಂದ್ರದ ಮದನ್ , ಕನಕಪುರ ಮುಖ್ಯ ರಸ್ತೆಯ ಸುನೀಲ್ ರಾಜು, ಉತ್ತರಹಳ್ಳಿಯ ಕೋದಂಡರಾಮ ಎಂಬುವವರನ್ನು ನಗರದ ಪಂಪ್ ವೆಲ್ ಬಳಿಯ ಲಾಡ್ಜ್ ಒಂದರಲ್ಲಿ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳಿಂದ ಒಂದು ರಿವಾಲ್ವರ್, ಎಂಟು ಸಜೀವ ಗುಂಡುಗಳು, ನಕಲಿ ಬಂದೂಕು, 10 ಮೊಬೈಲ್ ಮತ್ತು ಕೆಲವು ತಾಂತ್ರಿಕ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬೆದರಿಸಿ ಹಫ್ತಾ ವಸೂಲಿ ಮಾಡುವ ಯತ್ನದಲ್ಲಿದ್ದಂತೆ ಮೇಲ್ನೋಟಕ್ಕೆ ಕಂಡುಬಂದಿದೆ ಎಂದರು.

ADVERTISEMENT

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಕೆಲವು ಸಂಶಯಾಸ್ಪದ ವ್ಯಕ್ತಿಗಳು ತಂಗಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಾಂತಾರಾಮ ಮತ್ತು ತಂಡ ಈ ಆರೋಪಿಗಳನ್ನು ಬಂಧಿಸಿದೆ ಎಂದು ವಿವರ ನೀಡಿದರು.

ಸ್ಯಾಮ್ ಪೀಟರ್ ಪಶ್ಚಿಮ ಬಂಗಾಳ, ಒಡಿಶಾದ ಭುವನೇಶ್ವರದಲ್ಲೂ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಮಣಿಪಾಲದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ ನಿರ್ದೇಶಕ ಎಂಬ ನಕಲಿ ಗುರುತಿನ ಚೀಟಿ ಮತ್ತು ವಿಸಿಟಿಂಗ್ ಕಾರ್ಡ್ ಹೊಂದಿದ್ದ ಎಂದರು.

ಆರೋಪಿಗಳಿಂದ ವಶಪಡಿಸಿಕೊಂಡಿರುವ ವಸ್ತುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.