ADVERTISEMENT

‘ಆತ್ಮಹತ್ಯೆಗೆ ಮನಸ್ಸಾದರೆ ನೀರು ಕುಡಿದು ಮಲಗಿ’: ಮಂಜಮ್ಮ ಜೋಗತಿ

ಮಂಜಮ್ಮ ಜೋಗತಿ ಆತ್ಮಕಥೆಯ ಅಧ್ಯಾಯಗಳು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 20:17 IST
Last Updated 4 ಡಿಸೆಂಬರ್ 2022, 20:17 IST
ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಮಂಜಮ್ಮ ಜೋಗತಿ ಮಾತನಾಡುವಾಗ ಭಾವುಕರಾದರು.
ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಮಂಜಮ್ಮ ಜೋಗತಿ ಮಾತನಾಡುವಾಗ ಭಾವುಕರಾದರು.   

ಬೆಂಗಳೂರು: ‘ದಾವಣಗೆರೆಯ ಹೈಸ್ಕೂಲು ಮೈದಾನದ ಫುಟ್‌ಪಾತ್‌ ಬಳಿಐವರು ನನ್ನ ಮೇಲೆ ದೌರ್ಜನ್ಯ ಮಾಡಿದರು. ಸಾಗುವ ರೈಲಿಗೆ ದೇಹ ಕೊಟ್ಟು, ಛಿದ್ರವಾಗಿಬಿಡಬೇಕು ಎಂಬ ನಿರ್ಧಾರ ಆ ಘಟನೆಯ ನಂತರ ಮೂಡಿತು. ಆತ್ಮಹತ್ಯೆಯ ನಿರ್ಧಾರಕ್ಕೆ ಬಂದದ್ದು ಇದು ಎರಡನೇ ಸಲ. ಮೊದಲ ಸಲ ಭಿಕ್ಷೆ ಬೇಡಿದ ಹಣದಲ್ಲಿ ತಂದ ಟಿಕ್‌ಟ್ವೆಂಟಿ ಕುಡಿದೂ ಬದುಕಿದ್ದೆ. ಈ ಸಲ ಸಾಯಬೇಕು ಅಂದುಕೊಂಡರೂ ಎರಡನೇ ಮನಸ್ಸು ಬದುಕು ಎಂದಿತು. ಒಂದು ಚೊಂಬು ನೀರು ಕುಡಿದು, ಹೊದ್ದು ಮಲಗಿಬಿಟ್ಟೆ. ಆಮೇಲೆ ಎಂದೂ ಸಾಯುವ ನಿರ್ಧಾರ ಕೈಗೊಳ್ಳಲಿಲ್ಲ.’

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಭಾನುವಾರ ನಡೆದ ‘ನಡುವೆ ಸುಳಿವ ಹೆಣ್ಣು’ ಅನುಭವ ಹೇಳಿಕೊಳ್ಳುವ ಕಾರ್ಯಕ್ರಮದಲ್ಲಿ ಮಂಜಮ್ಮ ಜೋಗತಿ ತಮ್ಮ ಬದುಕಿನ ಕಷ್ಟಗಳ ಪುಟಗಳನ್ನು ಮತ್ತೆ ಮೆಲುಕು ಹಾಕಿದರು. ಅಷ್ಟೇ ಅಲ್ಲ, ಯಾವುದೇ ಕಾರಣಕ್ಕೆ ಯಾರಿಗೇ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿದರೂ,
ಒಂದು ಲೀಟರ್‌ ನೀರು ಕುಡಿದು ಹೊದ್ದು ಮಲಗುವಂತೆ ಸಲಹೆ
ನೀಡುತ್ತಿರುವುದಾಗಿಯೂ ತಿಳಿಸಿದರು.

ಹುಡುಗನಾಗಿದ್ದ ತಮ್ಮಲ್ಲಿ ಹೆಣ್ಣಾಗುವ ಬಯಕೆ ಮೂಡಿದ್ದು, ಅದಕ್ಕೆ ಸಮಾಜದಿಂದ ಸವಾಲುಗಳು ಎದುರಾದದ್ದು, ತಂದೆ–ತಾಯಿಯೇ ಮನೆಯಿಂದ ಹೊರಹಾಕುವಾಗಲೂ ಹೋಳಿಗೆ ತಿನಿಸಿ ಕಳುಹಿಸಿದ್ದು, ಮುತ್ತು ಕಟ್ಟಿಸಿ ಪರಿಹಾರಕ್ಕೆ ಹುಡುಕಾಡಿದ್ದು, ಭಿಕ್ಷಾಟನೆ ಬೇಡಿದ್ದು, ಯಲ್ಲಮ್ಮ ಜೋಗತಿಯಾಗಿ ಗೆದ್ದದ್ದು ಎಲ್ಲವನ್ನೂ ಅವರು ಪುಂಖಾನುಪುಂಖವಾಗಿ ಮೆಲುಕುಹಾಕಿದರು. ಮೊದಲ ಬಾರಿಗೆ ಅವರ ಅನುಭವಗಳಿಗೆ ಕಿವಿಯಾದ
ವರೆಲ್ಲ ಭಾವುಕರಾಗಿ, ಚಪ್ಪಾಳೆ ತಟ್ಟುತ್ತಾ ಪ್ರತಿಕ್ರಿಯಿಸಿದರು.

ADVERTISEMENT

ರಾತ್ರಿಯಿಂದ ಸೂರ್ಯ ಹುಟ್ಟುವವರೆಗೆ ನಡೆವ ಯಲ್ಲಮ್ಮ ಜೋಗತಿ ಪ್ರದರ್ಶನವನ್ನು ಕಾಲಕ್ಕೆ ತಕ್ಕಂತೆ ಒಂದು ಗಂಟೆ, ಅರ್ಧ ಗಂಟೆ, ಕೊನೆಗೆ ಮೂರು ನಿಮಿಷಕ್ಕೂ ಇಳಿಸಿ ಒಗ್ಗಿಸಿದ ಸವಾಲನ್ನು ಹಂಚಿಕೊಂಡರು.

ತಾವು ನಿಂತು ಮಾತನಾಡುತ್ತಿರುವ ಲಲಿತ್ ಅಶೋಕ ಹೋಟೆಲ್‌ನಲ್ಲಿಯೇ ನಾಲ್ವರು ಲಿಂಗತ್ವ ಅಲ್ಪಸಂಖ್ಯಾತರಿಗೆ ಕೆಲಸ ಕೊಟ್ಟಿರುವುದನ್ನು ಶ್ಲಾಘಿಸಿದ ಅವರು, ಅಂತಹ ಇನ್ನಷ್ಟು ಅವಕಾಶಗಳು ತಮ್ಮಂತೆ ನೊಂದವರಿಗೆ ಸಿಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಮಂಜಮ್ಮ ಅವರ ‘ನಡುವೆ ಸುಳಿವ ಹೆಣ್ಣು’ ಆತ್ಮಕಥೆಯನ್ನು ನಿರೂಪಣೆ ಮಾಡಿರುವ ಅರುಣ್ ಜೋಳದ ಕೂಡ್ಲಿಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.