ಬೆಂಗಳೂರು: ‘ಧರ್ಮಸ್ಥಳ ವಿಷಯದಲ್ಲಿ ಷಡ್ಯಂತ್ರ–ಪಿತೂರಿ ನಡೆಸಿದವರಿಗೆ ಆ ಮಂಜುನಾಥ ಸ್ವಾಮಿಯೇ ತಕ್ಕ ಶಾಸ್ತಿ ಮಾಡುತ್ತಾನೆ’ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಧರ್ಮಸ್ಥಳ ಪ್ರಕರಣದಲ್ಲಿ ರಾಜಕೀಯ ಬೆರೆಸುವ ಪ್ರಶ್ನೆಯೇ ಇಲ್ಲ. ಆದರೆ, ಸರ್ಕಾರ ಆರಂಭದಿಂದಲೂ ಸರಿಯಾಗಿ ನಡೆದುಕೊಂಡಿಲ್ಲ. ಇಲ್ಲಿ ತನಿಖೆ ಎಂಬ ನಾಟಕ ನಡೆಯುತ್ತಿದೆ. ಸಿ.ಎಸ್.ದ್ವಾರಕಾನಾಥ್ ಎಂಬ ವ್ಯಕ್ತಿ ದೂರು ನೀಡುತ್ತಾರೆ. ಸರ್ಕಾರ ತಕ್ಷಣವೇ ಎಸ್‌ಐಟಿ ರಚಿಸಿಬಿಡುತ್ತದೆ. ಇದರ ಹಿಂದೆ ಕೆಲ ಎಡಪಂಥೀಯ ಶಕ್ತಿಗಳ ಹುನ್ನಾರ ಮತ್ತು ಕುತಂತ್ರ ಅಡಗಿದೆ. ಕ್ಷೇತ್ರಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಸರ್ಕಾರ ನಡೆದುಕೊಂಡದ್ದು ಅಕ್ಷಮ್ಯ’ ಎಂದು ದೂರಿದರು.
ಜೆಡಿಎಸ್ ಧರ್ಮಸ್ಥಳ ಸತ್ಯ ಯಾತ್ರೆ: ‘ಇದೇ 31ರಿಂದ ‘ಧರ್ಮಸ್ಥಳ ಸತ್ಯ ಯಾತ್ರೆ’ ನಡೆಸಲಾಗುತ್ತದೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
‘ಧರ್ಮಸ್ಥಳಕ್ಕೆ ಅಪಮಾನ ಆಗುವ ರೀತಿಯ ಹೆಜ್ಜೆಗಳನ್ನು ಈ ಸರ್ಕಾರ ಇಟ್ಟಿದೆ. ನಾನು ಒಬ್ಬ ಭಕ್ತನಾಗಿ ಹಾಗೂ ನಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಧರ್ಮಸ್ಥಳ ಸತ್ಯ ಯಾತ್ರೆ ಮಾಡಿ, ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸುತ್ತೇವೆ’ ಎಂದರು.
ಕೇಂದ್ರ ಸಚಿವರಿಗೆ ಪತ್ರ: ಧರ್ಮಸ್ಥಳದ ಬಗ್ಗೆ ಯೂಟ್ಯೂಬ್‌ಗಳಲ್ಲಿ ಅವಹೇಳನಕಾರಿಯಾಗಿ ಹರಿಯಬಿಡಲಾಗಿದ್ದ ವಿಡಿಯೊಗಳನ್ನು ಕೆಲವು ಸುದ್ದಿವಾಹಿನಿಗಳೂ ಪ್ರಸಾರ ಮಾಡಿವೆ. ಅಂತಹ ವಿಡಿಯೊಗಗಳನ್ನು ತೆಗೆದುಹಾಕಲು ನಿರ್ದೇಶನ ನೀಡಿ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನಿಖಿಲ್ ಕುಮಾರಸ್ವಾಮಿ ಅವರು ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.