ADVERTISEMENT

ವಸತಿ ಶಾಲೆಗೆ ಸಫಾಯಿ ಕರ್ಮಚಾರಿ ಮಕ್ಕಳು

ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 23:26 IST
Last Updated 2 ಆಗಸ್ಟ್ 2023, 23:26 IST
ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ ಸಫಾಯಿ ಕರ್ಮಚಾರಿ ಪುನರ್ವಸತಿ ಯೋಜನೆಗಳ ಬಲವರ್ಧನ ಕಾರ್ಯಾಗಾರದಲ್ಲಿ ಸಮಾಜ ಶಾಸ್ತ್ರದಲ್ಲಿ ಚಿನ್ನದ ಪಾದಕಗಳಿಸಿದ ರಾಶಿ ಅವರನ್ನು ಸನ್ಮಾನಿಸಲಾಯಿತು. ಇ. ವೆಂಕಟಯ್ಯ, ಸುಜಾತಾ, ಕೆ.ರಮಾ, ಚಂದ್ರಕಲಾ, ಕೆ.ರಾಕೇಶ್‌ ಕುಮಾರ್‌ ಇದ್ದರು–ಪ್ರಜಾವಾಣಿ ಚಿತ್ರ.  
ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ ಸಫಾಯಿ ಕರ್ಮಚಾರಿ ಪುನರ್ವಸತಿ ಯೋಜನೆಗಳ ಬಲವರ್ಧನ ಕಾರ್ಯಾಗಾರದಲ್ಲಿ ಸಮಾಜ ಶಾಸ್ತ್ರದಲ್ಲಿ ಚಿನ್ನದ ಪಾದಕಗಳಿಸಿದ ರಾಶಿ ಅವರನ್ನು ಸನ್ಮಾನಿಸಲಾಯಿತು. ಇ. ವೆಂಕಟಯ್ಯ, ಸುಜಾತಾ, ಕೆ.ರಮಾ, ಚಂದ್ರಕಲಾ, ಕೆ.ರಾಕೇಶ್‌ ಕುಮಾರ್‌ ಇದ್ದರು–ಪ್ರಜಾವಾಣಿ ಚಿತ್ರ.     

ಬೆಂಗಳೂರು: ಸಫಾಯಿ ಕರ್ಮಚಾರಿ ಕುಟುಂಬದ ಮಕ್ಕಳಿಗೆ ಉತ್ತಮ ಕಲಿಕೆಯ ವಾತಾವರಣ ಕಲ್ಪಿಸಲು ಸರ್ಕಾರದ ವಸತಿ ಶಾಲೆಗಳಿಗೆ ಕಡ್ಡಾಯವಾಗಿ ಸೇರಿಸಬೇಕು ಎಂದು ಸಮಾಜಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್‌ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ, ತಳ ಸಮುದಾಯಗಳ ಅಧ್ಯಯನ ಕೇಂದ್ರ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಗುರುತಿಸಿದ ಸಫಾಯಿ ಕರ್ಮಚಾರಿ ಪುನರ್ವಸತಿ ಯೋಜನೆಗಳ ಬಲವರ್ಧನೆ’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಫಾಯಿ ಕರ್ಮಚಾರಿ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಆದ್ಯತೆ ನೀಡಿವೆ. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಶೇ 5ರಷ್ಟು ಸೀಟುಗಳನ್ನು ಅವರಿಗಾಗಿಯೇ ಮೀಸಲಿಡಲಾಗಿದೆ. ಪರೀಕ್ಷೆ ಸಹ ನಡೆಸದೆ 6ನೇ ತರಗತಿಗೆ ಪ್ರವೇಶ ನೀಡಲಾಗುತ್ತಿದೆ. 5ನೇ ತರಗತಿಯಲ್ಲಿ ಶೇ 60ರಷ್ಟು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಲೆಗಳಲ್ಲೂ ಪ್ರವೇಶಕ್ಕೆ ಅವಕಾಶವಿದೆ. ಅಲ್ಲದೇ, ಖಾಸಗಿ ಶಾಲೆಗಳ ಸಂಪೂರ್ಣ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ ಎಂದರು.

ADVERTISEMENT

ವೃತ್ತಿ ತೊರೆಯುವ ಸಫಾಯಿ ಕರ್ಮಚಾರಿಗಳಿಗೆ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಯೋಜನೆಗಳನ್ನು ರೂ‍ಪಿಸಲಾಗಿದೆ. ಕೃಷಿ, ಹೈನುಗಾರಿಕೆ ಸೇರಿದಂತೆ ಬದುಕಿಗೆ ಅಗತ್ಯವಾದ ಉದ್ಯೋಗ ಆಯ್ದುಕೊಳ್ಳಬಹುದು. ಬೇರೆ ವೃತ್ತಿ ನಡೆಸಲು ಧನ ಸಹಾಯ ದೊರೆಯಲಿದೆ. ಪುನರ್‌ವಸತಿ ಕಲ್ಪಿಸಿದ ಸ್ಥಳದಲ್ಲಿ ಹೊಸಬದುಕು ರೂಪಿಸಿಕೊಳ್ಳಬೇಕು. ವೃತ್ತಿಯಲ್ಲೇ ಉಳಿಯಲು ಇಚ್ಛಿಸುವವರು ಆಧುನಿಕ ತಂತ್ರಜ್ಞಾನ, ಯಂತ್ರಗಳ ಉಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಕಾನೂನು ಶಾಲೆ ನೀತಿ ಅಧ್ಯಯನ ಕೇಂದ್ರದ ಸೋನಿ ಪಿಲ್ಲಿಸರಿ, ಸಫಾಯಿ ಕರ್ಮಚಾರಿಗಳು ಕಾಯ್ದೆ, ಪುನರ್‌ವಸತಿ ಮತ್ತು ಹೊಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು. ಸ್ವಚ್ಛತೆಗಾಗಿ ಮ್ಯಾನ್‌ಹೋಲ್‌ಗಳಲ್ಲಿ ಇಳಿಯುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅದಕ್ಕೆ ಅವಕಾಶ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಿದೆ ಎಂದರು.

ರಾಷ್ಟ್ರೀಯ ಕಾನೂನು ಶಾಲೆಯ ಕಾರ್ಮಿಕ ಅಧ್ಯಯನ ಕೇಂದ್ರದ ನಿರ್ದೇಶಕ ಬಾಬು ಮ್ಯಾಥ್ಯೂ, ನಿವೃತ್ತ ಐಎಎಸ್‌ ಅಧಿಕಾರಿ ಇ. ವೆಂಕಟಯ್ಯ, ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ಚಂದ್ರಕಲಾ, ಅಧಿಕಾರಿಗಳಾದ ಸುಜಾತಾ, ರಮಾ, ಉಪಸ್ಥಿತರಿದ್ದರು.

ಬೇಡಿಕೆ ಈಡೇರಿಕೆಗೆ ಆಗ್ರಹ

ಸಫಾಯಿ ಕರ್ಮಚಾರಿ ಕುಟುಂಬದ ಮಕ್ಕಳಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಪ್ರತಿ ಮನೆ ನಿರ್ಮಾಣಕ್ಕೆ ₹ 10 ಲಕ್ಷ ನೆರವು ಒದಗಿಸಬೇಕು ಎಂದು ಆಗ್ರಹಿಸಿ ಸಫಾಯಿ ಕರ್ಮಚಾರಿ ಆಂದೋಲನದ ಸದಸ್ಯರು ಕಾರ್ಯಾಗಾರ ನಡೆಯುತ್ತಿದ್ದ ವಸಂತ ನಗರದ ಮೌಲಾನ ಅಬ್ದುಲ್‌ ಕಲಾಂ ಆಜಾದ್‌ ಭವನದ ಮುಂದೆ ಪ್ರತಿಭಟನೆ ನಡೆಸಿದರು.  ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಗುರುತಿನ ಚೀಟಿ ಯಂತ್ರಗಳ ಖರೀದಿಗೆ ಶೇ 100ರಷ್ಟು ಆರ್ಥಿಕ ನೆರವು ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಆರೋಗ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಆಂದೋಲನದ ಮುಖಂಡರಾದ ಡಿ.ಬಾಬುಲಾಲ್ ಜಿ.ಎನ್‌. ನಾಗೇಂದ್ರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.