ADVERTISEMENT

ಹಸ್ತಪ್ರತಿ ಸಂರಕ್ಷಣೆಗೆ ಕಾನೂನು: ಎಚ್.ಕೆ.ಪಾಟೀಲ

ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಟಲೀಕರಣ ಕುರಿತ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 15:21 IST
Last Updated 4 ಡಿಸೆಂಬರ್ 2025, 15:21 IST
ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಟಲೀಕರಣ ಕುರಿತ ಕಾರ್ಯಾಗಾರದಲ್ಲಿ ಎ. ದೇವರಾಜು,  ಕೆ.ವಿ. ತ್ರಿಲೋಕ್ ಚಂದ್ರ, ಎಚ್. ಕೆ. ಪಾಟೀಲ್, ಶಾಲಿನಿ ರಜನೀಶ್, ಬಿ. ಗೋಪಾಲಾಚಾರ್ಯ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಟಲೀಕರಣ ಕುರಿತ ಕಾರ್ಯಾಗಾರದಲ್ಲಿ ಎ. ದೇವರಾಜು,  ಕೆ.ವಿ. ತ್ರಿಲೋಕ್ ಚಂದ್ರ, ಎಚ್. ಕೆ. ಪಾಟೀಲ್, ಶಾಲಿನಿ ರಜನೀಶ್, ಬಿ. ಗೋಪಾಲಾಚಾರ್ಯ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕರ್ನಾಟಕದಲ್ಲಿ ಸ್ಮಾರಕಗಳ ರಕ್ಷಣೆಗೆ ಕಾನೂನು ರಚಿಸಿದ ರೀತಿಯಲ್ಲಿಯೇ ಹಸ್ತಪ್ರತಿಗಳನ್ನು ಸಂರಕ್ಷಿಸಲು ಹೊಸ ಕಾನೂನು ರೂಪಿಸಲಾಗುವುದು’ ಎಂದು ಪ್ರವಾಸೋದ್ಯಮ ಹಾಗೂ ಕಾನೂನು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯ ನಗರದ ವೆಂಕಟಪ್ಪ ಚಿತ್ರ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಟಲೀಕರಣ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕರ್ನಾಟಕದಲ್ಲಿ 25 ಸಾವಿರ ಸ್ಮಾರಕಗಳಿದ್ದು, ಕಾನೂನು ರೂಪಿಸಿದ ನಂತರ 800 ರಕ್ಷಿತ ಸ್ಮಾರಕಗಳೆಂದು ಘೋಷಿಸಲು ಸಹಕಾರಿಯಾಗಿದೆ. 5,000 ಸ್ಮಾರಕಗಳ ಘೋಷಣೆಗೆ ಪ್ರಯತ್ನ ನಡೆದಿದೆ. ಇದೇ ಮಾದರಿಯಲ್ಲಿಯೇ ಇತಿಹಾಸದ ಮಹತ್ವ ತಿಳಿಸುವ ಹಸ್ತಪ್ರತಿಗಳನ್ನು ಮುಂದಿನ ಪೀಳಿಗೆಗೆ ರಕ್ಷಿಸಲು ಕಾನೂನು ಬೇಕಾಗಿದೆ. ಕಾನೂನು ಹೇಗಿರಬೇಕು ಎಂದು ಈ ಕ್ಷೇತ್ರದ ಪರಿಣಿತರು ಸಲಹೆ ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ವರ್ಷದ ಹಿಂದೆ ವನ್ಯಜೀವಿಗಳ ದೇಹದ ಭಾಗ, ಉತ್ಪನ್ನಗಳನ್ನು ಯಾರೂ ಇಟ್ಟುಕೊಳ್ಳಬಾರದು. ಮಠ ಸೇರಿದಂತೆ ಎಲ್ಲೇ ಇದ್ದರೂ ವಾಪಸ್‌ ನೀಡಬೇಕು ಎಂದು ಸರ್ಕಾರ ಕಾನೂನು ಜಾರಿಗೊಳಿಸಿತು. ಆಗ ಹುಲಿ ಚರ್ಮಗಳನ್ನೂ ಸರ್ಕಾರಕ್ಕೆ ಒಪ್ಪಿಸಲಾಯಿತು. ಆದರೆ ಹಸ್ತಪ್ರತಿಗಳನ್ನು ಸಂಗ್ರಹಿಸಿಟ್ಟುಕೊಂಡವರಿಗೆ ಅನ್ಯಾಯ, ಒತ್ತಡ ಆಗದ ರೀತಿ ಡಿಜಿಟಲೀಕರಣ ಪ್ರಕ್ರಿಯೆ ಮುಗಿಸಿ ಹಿಂದಿರುಗಿಸಲಾಗುತ್ತದೆ. ನಿಮ್ಮಿಂದ ಹಸ್ತಪ್ರತಿ ಕಿತ್ತುಕೊಳ್ಳುವುದಿಲ್ಲ ಎನ್ನುವ ವಿಶ್ವಾಸವನ್ನು ಮೂಡಿಸಬೇಕು’ ಎಂದು ಪಾಟೀಲ ಸಲಹೆ ನೀಡಿದರು.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮಾತನಾಡಿ, ‘1 ಲಕ್ಷಕ್ಕೂ ಅಧಿಕ ಹಸ್ತಪ್ರತಿಗಳು ಕರ್ನಾಟಕದಲ್ಲಿ ಸಂಗ್ರಹವಾಗಿವೆ. ಡಿಜಿಟಲೀಕರಣದ ಭಾಗವಾಗಿ ಹಲವು ಕಡೆ ಇರುವ ಹಸ್ತಪ್ರತಿಗಳ ಸಂಗ್ರಹಕ್ಕೆ ಈಗ ವೇಗ ಸಿಗಲಿದೆ. ಆಯುರ್ವೇದ ಪದ್ದತಿ ಸೇರಿದಂತೆ ಹಲವು ವಿಷಯಗಳನ್ನು ಹಸ್ತಪ್ರತಿಗಳಿಂದ ಪಡೆದುಕೊಂಡು ನಾವು ಜ್ಞಾನವಾಗಿ ಮಾತ್ರವಲ್ಲದೇ ಆರೋಗ್ಯ ಸುಧಾರಣೆಗೂ ಬಳಸಿಕೊಳ್ಳಲು ಅವಕಾಶವಿದೆ’ ಎಂದು ಹೇಳಿದರು.

ಜ್ಞಾನ ಭಾರತಂ ಮಿಷನ್ ಮುಖ್ಯ ಸಂಚಾಲಕ ಬಿ.ಗೋಪಾಲಾಚಾರ್ಯ, ತಜ್ಞರಾದ ಎಚ್‌.ವಿ.ನಾಗರಾಜರಾವ್, ಎ.ವಿ.ನಾಗಸಂಪಿಗೆ ವಿಷಯ ಮಂಡಿಸಿದರು. ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ, ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕ ಡಿ.ಪಿ.ಮಧುಸೂದನಾಚಾರ್ಯ ಉಪಸ್ಥಿತರಿದ್ದರು.

‘ಆದಾಯವೂ ಸಿಗಬಹುದು’

ಪರಂಪರೆ ಪುರಾತತ್ವ ಇಲಾಖೆ ಆಯುಕ್ತ ಎ.ದೇವರಾಜು ಮಾತನಾಡಿ ‘ಕೇಂದ್ರ ಸರ್ಕಾರವು ಜ್ಞಾನಭಾರತಂ ಯೋಜನೆಯಡಿ ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ಒತ್ತು ನೀಡಿದೆ. ಕೇಂದ್ರ ಸಂಸ್ಕೃತಿ ಇಲಾಖೆ ಆರ್ಥಿಕ ನೆರವು ನೀಡಲಿದೆ. ಹಸ್ತ ಪ್ರತಿ ಇಟ್ಟುಕೊಂಡುವವರು ನಮಗೇ ಇದನ್ನು ನೀಡಬೇಕಿಲ್ಲ. ಮಾಹಿತಿ ಒದಗಿಸಿದರೆ ಒಪ್ಪಂದ ಮಾಡಿಕೊಂಡ ಸಂಸ್ಥೆ ಮೂಲಕವೇ  ಡಿಜಿಟಲೀಕರಣ ಪ್ರಕ್ರಿಯೆ ಮುಗಿಸಿ ಸಂಬಂಧಪಟ್ಟವರಿಗೆ ಹಿಂದುರಿಗಿಸಲಾಗುತ್ತದೆ. ಬೌದ್ಧಿಕ ಹಕ್ಕು ಸ್ವಾಮ್ಯದ ಅಡಿ ಹಸ್ತಪ್ರತಿ ಬಳಸಿದವರಿಂದ ಸಂಗ್ರಹಕಾರರಿಗೆ ಆದಾಯವೂ ಬರಬಹುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.