ADVERTISEMENT

ಮಾವೊವಾದಿ ಮುಖಂಡ ಅನಿರುದ್ಧ ರಾಜನ್‌ ಜಾಮೀನು ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 9 ಮೇ 2025, 16:18 IST
Last Updated 9 ಮೇ 2025, 16:18 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಮತ್ತು ಭಾರತದ ವಿರುದ್ಧ ಯುದ್ಧ ಸಾರುವ ಆರೋಪ ಹೊತ್ತು ಬಂಧನದಲ್ಲಿರುವ ಮಾವೋವಾದಿ (ಸಿಪಿಐ–ಎಂ) ಮುಖಂಡ ಅನಿರುದ್ಧ ರಾಜನ್‌ಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಿರಾಕರಿಸಿದೆ.

ಈ ಕುರಿತಂತೆ ಚೆನ್ನೈನ ಇಂಜಂಬಾಕ್ಕಂ ನಿವಾಸಿ ಲೆಕ್ಕ ಪರಿಶೋಧಕರಾದ ಅನಿರುದ್ಧ ರಾಜನ್‌ (34) ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ADVERTISEMENT

‘ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ 90 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ನನಗೆ ಜಾಮೀನು (ಡಿಫಾಲ್ಟ್ ಬೇಲ್) ಮಂಜೂರು ಮಾಡಬೇಕು’ ಎಂದು ಕೋರಿ ಅನಿರುದ್ಧ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಪ್ರತಿಯಾಗಿ ಪ್ರಾಸಿಕ್ಯೂಷನ್‌, ‘ಅರ್ಜಿದಾರರ ವಿರುದ್ಧ ಗುರುತರ ಆರೋಪಗಳಿದ್ದು ತನಿಖೆ ಮುಂದುವರಿಸಲು ಇನ್ನಷ್ಟು ಕಾಲಾವಕಾಶ ಬೇಕಿದೆ. ದೋಷಾರೋಪ ಪಟ್ಟಿ ಸಲ್ಲಿಸಲು 180 ದಿನ ನೀಡಬೇಕು’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಪ್ರಾಸಿಕ್ಯೂಷನ್‌ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಪುರಸ್ಕರಿಸಿತ್ತು. ರಾಜ್ಯ ಪ್ರಾಸಿಕ್ಯೂಷನ್‌ ಪರ ಪಿ.ತೇಜೇಶ್‌ ಮತ್ತು ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಎಸ್‌.ಬಾಲಕೃಷ್ಣನ್‌ ವಾದ ಮಂಡಿಸಿದ್ದರು.

ಅನಿರುದ್ಧ ರಾಜನ್‌ ಅವರನ್ನು ನಗರದ ಉಪ್ಪಾರಪೇಟೆ ಪೊಲೀಸರು 2024ರ ಸೆಪ್ಟೆಂಬರ್ 5ರಂದು ಬಂಧಿಸಿದ್ದರು. ಮರುದಿನ (ಸೆ.6) ಎನ್‌ಐಎ ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ವಕೀಲರ ಚಿಹ್ನೆ ಬಳಕೆ: ಕ್ರಮ

ರಾಜ್ಯದಲ್ಲಿ ವಕೀಲರಲ್ಲದವರು ತಮ್ಮ ವಾಹನಗಳ ಮೇಲೆ ವಕೀಲರ ಚಿಹ್ನೆ ಲಗತ್ತಿಸಿದ್ದರೆ ಅಂತಹ ವಾಹನಗಳ ಸಂಖ್ಯೆ ಮತ್ತು ಫೊಟೋ ಕಳುಹಿಸಿಕೊಡುವಂತೆ ಕರ್ನಾಟಕ  ರಾಜ್ಯ ವಕೀಲರ ಪರಿಷತ್‌ ಸಾರ್ವಜನಿಕರು ಹಾಗೂ ವಕೀಲರಲ್ಲಿ ಮನವಿ ಮಾಡಿದೆ.

ಈ ಕುರಿತು ಪ್ರಕಟಣೆ ನೀಡಿರುವ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಸ್‌.ಎಸ್‌. ಮಿಟ್ಟಲಕೋಡ ‘ರಾಜ್ಯದಲ್ಲಿ ವಕೀಲರಲ್ಲದವರು ಹಾಗೂ ವಾಣಿಜ್ಯ ವಾಹನಗಳಿಗೆ ವಕೀಲರ ಚಿಹ್ನೆ ಲಗತ್ತಿಸಿಕೊಂಡು ವಕೀಲ ಸಮುದಾಯದ ಹೆಸರಿನ ದುರುಪಯೋಗ ಹಾಗೂ ವೃತ್ತಿಗೆ ಅಪಮಾನ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ. ‘ವಾಹನಗಳ ಸಂಖ್ಯೆ ಅಥವಾ ಪೊಟೋವನ್ನು ಪರಿಷತ್ತಿನ ಅಧಿಕೃತ ಇ ಮೇಲ್‌ Kar_barcouncil@yahoo.com ಗೆ ಕಳುಹಿಸಿಕೊಡಬೇಕು. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.