ADVERTISEMENT

ಚಿನ್ನದ ಚೆಂಡಿನೊಂದಿಗೆ ಮರಡೋನಾ ಅಭಿಮಾನಿ ಡ್ರಗ್ಸ್‌ ವಿರೋಧಿ ಜಾಗೃತಿ ಯಾತ್ರೆ

ಡ್ರಗ್ಸ್‌ ವಿರುದ್ಧ ಜನಜಾಗೃತಿಗಾಗಿ ನೆಚ್ಚಿನ ಆಟಗಾರನ ಚಿನ್ನಲೇಪಿತ ಪ್ರತಿಮೆ ಮಾಡಿಸಿದ ಬೋಚೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 7:06 IST
Last Updated 3 ಡಿಸೆಂಬರ್ 2022, 7:06 IST
ಚಿನ್ನದಿಂದ ನಿರ್ಮಿಸಿದ ಫುಟ್‌ಬಾಲ್‌ ಚೆಂಡಿನ ಪ್ರತಿಕೃತಿಯನ್ನು ಬೋಚೆ (ಬಾಬ್ಬಿ ಚೆಮ್ಮನೂರ್‌) ಅವರು ನಗರದಲ್ಲಿ ಶುಕ್ರವಾರ ಪ್ರದರ್ಶಿಸಿದರು– ಪ್ರಜಾವಾಣಿ ಚಿತ್ರ
ಚಿನ್ನದಿಂದ ನಿರ್ಮಿಸಿದ ಫುಟ್‌ಬಾಲ್‌ ಚೆಂಡಿನ ಪ್ರತಿಕೃತಿಯನ್ನು ಬೋಚೆ (ಬಾಬ್ಬಿ ಚೆಮ್ಮನೂರ್‌) ಅವರು ನಗರದಲ್ಲಿ ಶುಕ್ರವಾರ ಪ್ರದರ್ಶಿಸಿದರು– ಪ್ರಜಾವಾಣಿ ಚಿತ್ರ   

ಮಂಗಳೂರು: ಫುಟ್‌ಬಾಲ್‌ ದಂತಕತೆ ಡಿಯೆಗೊ ಮರಡೊನಾ ಅಭಿಮಾನಿ ಕೇರಳದ ಬೋಚೆ (ಡಾ.ಬಾಬ್ಬಿ ಚೆಮ್ಮನೂರ್‌) ಡ್ರಗ್ಸ್‌ ಸೇವನೆ ವಿರುದ್ಧ ಯುವಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ ಕೈಗೊಂಡಿದ್ದಾರೆ. ಈ ಸಲುವಾಗಿ ಮರಡೋನಾ ಜೊತೆ ತಾವು ಇರುವಂತೆ ಆಳೆತ್ತರದ, ಚಿನ್ನ ಲೇಪಿತ ಪ್ರತಿಮೆ ಮಾಡಿಸಿದ್ದಾರೆ. ಆ ಪ್ರತಿಕೃತಿ ಮತ್ತು ಚಿನ್ನದಿಂದ ತಯಾರಿಸಿದ ಫುಟ್‌ಬಾಲ್‌ ಪ್ರತಿಕೃತಿಯನ್ನು ಹಿಡಿದುಕೊಂಡು ಯಾತ್ರೆ ಕೈಗೊಂಡಿದ್ದಾರೆ.

ಮರಡೋನಾ ಅವರ ಚಿನ್ನ ಲೇಪಿತ ಪ್ರತಿಕೃತಿಯನ್ನು ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ನಡೆಯುವ ಅಂಗಣದಲ್ಲಿ ಪ್ರದರ್ಶಿಸಲು ಉದ್ದೇಶಿಸಿರುವ ಅವರು ದೇಶದ ವಿವಿಧ ನಗರಗಳಲ್ಲಿ ಅದರ ಪ್ರದರ್ಶನ ಏರ್ಪಡಿಸಿ, ಡ್ರಗ್ಸ್‌ ಸೇವನೆ ವಿರುದ್ಧ ಯುವಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಬೋಚೆ, ‘ಮರಡೋನಾ ಅವರ ಚಿನ್ನಲೇಪಿತ ಪ್ರತಿಮೆಯ ಜೊತೆ ಸೆಲ್ಫಿ ತೆಗೆದು ಇನ್‌ಸ್ಟಾಗ್ರಾಂ ಮೂಲಕ ಕಳುಹಿಸಬಹುದು. ಆಯ್ದ ಕೆಲವರಿಗೆ ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ಒಬ್ಬರು ಚಿನ್ನದಿಂದ ನಿರ್ಮಿಸಿರುವ ಫುಟ್‌ಬಾಲ್‌ ಪ್ರತಿಕೃತಿ ಗೆಲ್ಲಲು ಅವಕಾಶ ಪಡೆಯಲಿದ್ದಾರೆ’ ಎಂದರು.

ADVERTISEMENT

‘ಡ್ರಗ್ಸ್‌ ವಿರುದ್ಧದ ಜಾಗೃತಿ ಅಭಿಯಾನವು ಕರ್ನಾಟಕದ ಕರಾವಳಿಯ ಮಂಗಳೂರು, ಉಡುಪಿ, ಭಟ್ಕಳ, ಗೋವಾ ಮಾರ್ಗವಾಗಿ ಮುಂಬೈ ತಲುಪಲಿದೆ. ಅಲ್ಲಿಂದ ವಿಮಾನ ಮೂಲಕ ಮರಡೋನಾ ಪ್ರತಿಮೆಯನ್ನು ಕತಾರ್‌ಗೆ ಒಯ್ದು, ಅಲ್ಲಿನ ಮ್ಯೂಸಿಯಂನಲ್ಲಿ ಪ್ರತಿಷ್ಠಾಪಿಸಲಾಗುವುದು’ ಎಂದರು.

‘ಮರಡೊನಾ ಅವರದು ಮಗುವಿನಂತಹ ಮನಸು. ಜೀವನದುದ್ದಕ್ಕೂ ಡ್ರಗ್ಸ್‌ ಸೇವನೆಯಿಂದ ಸಮಸ್ಯೆಗೆ ಸಿಲುಕಿದವರು ಕೊನೆಗಾಲದಲ್ಲಿ ಮಾದಕ ದ್ರವ್ಯ ಸೇವನೆ ವಿರುದ್ಧದ ಜಾಗೃತಿಯಲ್ಲಿ ತೊಡಗಿದ್ದರು. ಅವರು ನನ್ನ ನೆಚ್ಚಿನ ಸ್ನೇಹಿತ. ಚಿನ್ನ ಲೇಪಿತ ಪ್ರತಿಮೆ ಮಾಡಿಸಬೇಕೆಂಬ ಕನಸನ್ನು ನನ್ನೊಂದಿಗೆ ತೋಡಿಕೊಂಡಿದ್ದರು. ಅವರು ಬದುಕಿದ್ದಾಗ ಅದನ್ನು ಮಾಡಿಸಲು ಸಾಧ್ಯವಾಗಿಲ್ಲ. ಫಿಫಾ ವಿಶ್ವಕಪ್‌ ಸಂದರ್ಭದಲ್ಲಿ ಅವರ ಕನಸನ್ನು ನನಸು ಮಾಡುತ್ತಿದ್ದೇನೆ‘ ಎಂದರು.

’ಮರಡೋನಾ ನೆನಪಿನಾರ್ಥ ಅರ್ಜೆಂಟೀನಾ ಫುಟ್‌ಬಾಲ್‌ ಅಸೊಸಿಯೇಷನ್ ವತಿಯಿಂದ ಭಾರತೀಯರಿಗೆ ಫುಟ್‌ಬಾಲ್‌ ತರಬೇತಿ ಕೊಡಿಸಲು ಕ್ರಮ ಕೈಗೊಂಡಿದ್ದೇನೆ. ಫಿಫಾ ವಿಶ್ವಕಪ್‌ನಲ್ಲಿ ಭಾರತ ತಂಡವೂ ಪ್ರತಿನಿಧಿಸಬೇಕು ಎಂಬುದು ನನ್ನ ಕನಸು’ ಎಂದರು.

‘ಫುಟ್‌ಬಾಲ್‌ನ ಚಿನ್ನದ ಪ್ರತಿಕೃತಿಗೆ ₹ 6 ಲಕ್ಷ ಹಾಗೂ ಮರಡೋನಾ ಅವರ ಚಿನ್ನಲೇಪಿತ ಪ್ರತಿಮೆಗೆ ₹ 1 ಕೋಟಿ ವೆಚ್ಚವಾಗಿದೆ‘ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಫುಟ್‌ಬಾಲ್‌ ಸಂಸ್ಥೆಯ ಡಿ.ಎಂ.ಅಸ್ಲಂ ಹಾಗೂ ಲೊವೆಟ್ಟಾ ಮಿನೇಜ್‌, ಬೋಚೆ ಅವರ ಆಪ್ತ ಸಹಾಯಕಿ ಸರಿನಾ, ಸರ್ವಜನಿಕ ಸಂಪರ್ಕಾಧಿಕಾರಿ ಜೋಜಿ ಎಂ.ಜೆ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.