ADVERTISEMENT

ಶ್ರೀಮಂತ ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 21:17 IST
Last Updated 6 ಆಗಸ್ಟ್ 2021, 21:17 IST
ಶ್ರೀಮಂತ ಪಾಟೀಲ
ಶ್ರೀಮಂತ ಪಾಟೀಲ   

ಬೆಂಗಳೂರು: ಮರಾಠಾ ಸಮುದಾಯವನ್ನು ಪ್ರತಿನಿಧಿಸುವ ಏಕೈಕ ಶಾಸಕರಾಗಿರುವ ಶ್ರೀಮಂತ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ಕರ್ನಾಟಕ ಕ್ಷತ್ರಿಯ ಮರಾಠಾ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಒಕ್ಕೂಟದ ವತಿಯಿಂದ ಶುಕ್ರವಾರ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್‌ ಅಧ್ಯಕ್ಷ ರಾಣೋಜಿರಾವ್‌ ಸಾಠೆ, ‘ಶ್ರೀಮಂತ ಪಾಟೀಲ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾದವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಿಂದ ಅವರನ್ನು ಕೈಬಿಟ್ಟಿರುವುದರಿಂದ ಮರಾಠಾ ಸಮುದಾಯದ ಎಲ್ಲ ಜನರಿಗೂ ನೋವುಂಟಾಗಿದೆ’ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮರಾಠಾ ಸಮುದಾಯವನ್ನು ಕಡೆಗಣಿಸಲಾಗಿದೆ. ಬಸವರಾಜ ಬೊಮ್ಮಾಯಿ ಅವರು ಶ್ರೀಮಂತ ಪಾಟೀಲ ಅವರನ್ನು ತಕ್ಷಣವೇ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿದರೂ, ಎಂಟು ತಿಂಗಳಿನಿಂದ ಅನುದಾನ ನೀಡಿಲ್ಲ. ಅಧ್ಯಕ್ಷರು ಮತ್ತು ನಿರ್ದೇಶಕರ ನೇಮಕಾತಿಯನ್ನೂ ಮಾಡಿಲ್ಲ. ಸಮುದಾಯವನ್ನು ಕಡೆಗಣಿಸುವುದು ಇದೇ ರೀತಿಯಲ್ಲಿ ಮುಂದುವರಿದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಕರ್ನಾಟಕ ಮರಾಠಾ ವೆಲ್‌ಫೇರ್‌ ಅಸೋಸಿಯೇಷನ್‌ ಅಧ್ಯಕ್ಷ ಮನೋಜ್‌ ಕುಮಾರ್‌, ಮರಾಠಾ ಸಮುದಾಯದ ಮುಖಂಡರಾದ ಗಣೇಶ್‌ ರಾವ್‌ ಕೇಸರ್ಕರ್‌, ಮಾರುತಿ ರಾವ್‌ ಮೋರೆ, ಕಮಲೇಶ್‌ ಪಡ್ತಾರೆ, ಪ್ರವೀಣ್‌ ಮಾನ್‌, ವೀರೂ ಫಿಶೆ, ಶೈಲೇಶ ನಾಜರೆ, ನಾಗೋಜಿರಾವ್‌ ಕರಾಡೆ, ಸತ್ಯನಾರಾಯಣ್‌ ಬಾಬಡೆ, ನಾಗರಾಜ್‌ ವನ್ಸ್ ಮತ್ತು ತುಳಸಿರಾಮ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.