ADVERTISEMENT

ಉನ್ನತ ಶಿಕ್ಷಣ ಸಚಿವರ ಕಚೇರಿ ಎದುರು ಮರಿತಿಬ್ಬೇಗೌಡ ಧರಣಿ

​ಪ್ರಜಾವಾಣಿ ವಾರ್ತೆ
Published 9 ಮೇ 2022, 16:16 IST
Last Updated 9 ಮೇ 2022, 16:16 IST
ಉಪನ್ಯಾಸಕರ ನಿಯೋಜನೆ ರದ್ಧತಿ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರು ವಿಕಾಸಸೌಧದಲ್ಲಿರುವ ಉನ್ನತ ಶಿಕ್ಷಣ ಸಚಿವರ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು– ಪ್ರಜಾವಾಣಿ ಚಿತ್ರ
ಉಪನ್ಯಾಸಕರ ನಿಯೋಜನೆ ರದ್ಧತಿ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರು ವಿಕಾಸಸೌಧದಲ್ಲಿರುವ ಉನ್ನತ ಶಿಕ್ಷಣ ಸಚಿವರ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ 1,200 ಉಪನ್ಯಾಸಕರ ನಿಯೋಜನೆ ಆದೇಶವನ್ನು ರದ್ದು ಮಾಡಿರುವುದನ್ನು ವಿರೋಧಿಸಿ ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ನೇತೃತ್ವದಲ್ಲಿ ಪರಿಷತ್‌ ಸದಸ್ಯರು ವಿಕಾಸಸೌಧದಲ್ಲಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಉಪ ನಾಯಕ ಕೆ. ಗೋವಿಂದರಾಜ್‌, ಮುಖ್ಯ ಸಚೇತಕ ಪ್ರಕಾಶ್‌ ರಾಥೋಡ್‌, ಸದಸ್ಯರಾದ ಕೊಂಡಜ್ಜಿ ಮೋಹನ್‌, ಯು.ಬಿ. ವೆಂಕಟೇಶ್‌ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು.

‘ಪ್ರದೀಪ್‌ ಆಯುಕ್ತರೇ ಗೋ ಬ್ಯಾಕ್‌ ಟು ಮಹಾರಾಷ್ಟ್ರ’, ‘ಬೋಧಕರ ನಿಯೋಜನೆ ರದ್ಧತಿ ಆದೇಶ ಹಿಂಪಡೆಯಬೇಕು’, ‘ಆಯುಕ್ತರ ಕೈಗೊಂಬೆ ಸಚಿವ ಡಾ. ಅಶ್ವತ್ಥ ನಾರಾಯಣ’, ‘ಆಯುಕ್ತರ ಸರ್ವಾಧಿಕಾರಿ ಧೋರಣೆಗೆ ಧಿಕ್ಕಾರ’ ಎಂಬ ಭಿತ್ತಿಪತ್ರಗಳನ್ನು ವಿಧಾನ ಪರಿಷತ್‌ ಸದಸ್ಯರು ಧರಣಿ ನಡೆಸಿದರು.

ADVERTISEMENT

ಸಂಜೆವರೆಗೂ ಧರಣಿ: ಅಶ್ವತ್ಥ ನಾರಾಯಣ ಸ್ಥಳಕ್ಕೆ ಬಂದು ನಿಯೋಜನೆ ರದ್ಧತಿ ಆದೇಶ ಹಿಂಪಡೆಯಬೇಕು ಎಂದು ಪಟ್ಟುಹಿಡಿದು ಮರಿತಿಬ್ಬೇಗೌಡ ಸಂಜೆಯವರೆಗೂ ಧರಣಿ ನಡೆಸಿದರು. ಸ್ಥಳಕ್ಕೆ ಬಂದ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್‌ ನಾಯಕ್‌ ಮತ್ತು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌, ಮಂಗಳವಾರ ಸಚಿವರ ಜತೆ ಚರ್ಚೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದರು. ಸಂಜೆ 5.30ಕ್ಕೆ ಮರಿತಿಬ್ಬೇಗೌಡ ಧರಣಿ ಅಂತ್ಯಗೊಳಿಸಿದರು.

‘ಆರೋಪ ಸತ್ಯಕ್ಕೆ ದೂರ’

‘ಉಪನ್ಯಾಸಕರ ನಿಯೋಜನೆ ರದ್ಧತಿಯನ್ನು ಏಕಾಏಕಿ ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ನೇಮಕಾತಿ ಹೊಂದಿದ ಕಾಲೇಜುಗಳನ್ನು ಬಿಟ್ಟು, ಇತರೆಡೆ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರ ನಿಯೋಜನೆ ರದ್ದು ಮಾಡುವಂತೆ ಮರಿತಿಬ್ಬೇಗೌಡ ಸೇರಿದಂತೆ ವಿಧಾನ ಪರಿಷತ್‌ನ ಹಲವು ಸದಸ್ಯರು ಈ ಹಿಂದೆ ಒತ್ತಾಯಿಸಿದ್ದರು. ಅವರ ಮನವಿಗೆ ಸ್ಪಂದಿಸಿ ನಿಯೋಜನೆ ರದ್ದು ಮಾಡಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಧರಣಿ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅನೇಕ ಶಾಸಕರ ಬೇಡಿಕೆಯಂತೆ ಈ ನಿರ್ಧಾರ ಮಾಡಲಾಗಿದೆ. 700 ಕ್ಕೂ ಹೆಚ್ಚು ಉಪನ್ಯಾಸಕರು ನೇಮಕಾತಿ ಹೊಂದಿದ ಕಾಲೇಜುಗಳನ್ನು ಬಿಟ್ಟು, ನಗರಗಳಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಆದರೆ, ಮರಿತಿಬ್ಬೇಗೌಡ ಮತ್ತು ಇತರರು ನನ್ನ ಕಚೇರಿ ಎದುರು ಧರಣಿ ನಡೆಸಿರುವುದು ಸೋಜಿಗದ ಸಂಗತಿ. ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರೂ ವಿಷಯವನ್ನು ಸರಿಯಾಗಿ ತಿಳಿಯದೇ ಬೆಂಬಲಿಸಿರುವುದು ಇನ್ನೂ ಆಶ್ಚರ್ಯ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.