ADVERTISEMENT

ಉನ್ನತ ಶಿಕ್ಷಣ ಸಚಿವರ ಧೋರಣೆ ವಿರುದ್ಧ ಮರಿತಿಬ್ಬೇಗೌಡ ಧರಣಿ

ಅತಿಥಿ ಉಪನ್ಯಾಸಕರ ಗೌರವಧನ ಪರಿಷ್ಕರಣೆಯಲ್ಲಿ ತಾರತಮ್ಯದ ಆರೋಪ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2022, 13:48 IST
Last Updated 26 ಡಿಸೆಂಬರ್ 2022, 13:48 IST
ಮರಿತಿಬ್ಬೇಗೌಡ
ಮರಿತಿಬ್ಬೇಗೌಡ    

ಬೆಳಗಾವಿ: ಅತಿಥಿ ಉಪನ್ಯಾಸಕರ ಗೌರವ ಧನ ಪರಿಷ್ಕರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಅವರು ವಿಧಾನ ಪರಿಷತ್‌ನಲ್ಲಿ ಸೋಮವಾರ ಕೆಲಕಾಲ ಧರಣಿ ನಡೆಸಿದರು.

ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರ ಗೌರವ ಧನ ಪರಿಷ್ಕರಣೆ ಕುರಿತು ಮರಿತಿಬ್ಬೇಗೌಡರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ‘ಸೇವಾವಧಿ, ಅರ್ಹತೆ ಮತ್ತು ಕಾರ್ಯಭಾರದ ಆಧಾರದಲ್ಲಿ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ₹ 26,000ದಿಂದ ₹ 32,000ದವರೆಗೂ ಗೌರವ ಧನ ನಿಗದಿಪಡಿಸಲಾಗಿದೆ. ಪರಿಷ್ಕೃತ ದರದಲ್ಲೇ ಗೌರವ ಧನ ಪಾವತಿಸಲಾಗುತ್ತಿದೆ’ ಎಂದರು.

‘ಮೈಸೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಗೌರವ ಧನ ಪರಿಷ್ಕರಣೆ ಹಿಂಪಡೆಯಲಾಗಿದೆ. ಒಂದು ತಿಂಗಳು ಮಾತ್ರ ಪರಿಷ್ಕೃತ ದರದಲ್ಲಿ ಗೌರವ ಧನ ನೀಡಿದ್ದರು. ನಂತರ ಸ್ಥಗಿತಗೊಳಿಸಲಾಗಿದೆ. ಈ ಉಪನ್ಯಾಸಕರಿಗೆ ತಿಂಗಳಿಗೆ ರಜಾ ಸೌಲಭ್ಯ ಹಾಗೂ ಮೌಲ್ಯಮಾಪನದ ಅವಧಿಯ ವೇತನವನ್ನೂ ನೀಡುತ್ತಿಲ್ಲ. ಸಚಿವರು ಸುಳ್ಳು ಹೇಳುತ್ತಿದ್ದಾರೆ’ ಎಂದು ಮರಿತಿಬ್ಬೇಗೌಡ ಆಕ್ಷೇಪಿಸಿದರು.

ADVERTISEMENT

‘ವಿಶ್ವವಿದ್ಯಾಲಯಗಳು ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತವೆ. ವಿಶ್ವವಿದ್ಯಾಲಯಗಳ ಆರ್ಥಿಕ ಸಮಿತಿಯ ತೀರ್ಮಾನದಂತೆ ಈ ನಿರ್ಧಾರ ಕೈಗೊಳ್ಳಲಾಗಿರುತ್ತದೆ’ ಎಂದು ಸಚಿವರು ತಮ್ಮ ಮಾತನ್ನು ಸಮರ್ಥಿಸಿಕೊಂಡರು. ಪುನಃ ಸಚಿವರ ಉತ್ತರವನ್ನು ಮರಿತಿಬ್ಬೇಗೌಡ ಏರಿದ ಧ್ವನಿಯಲ್ಲಿ ವಿರೋಧಿಸಿದರು. ‘ಸತ್ಯ ಹೇಳಿದರೆ ನಿಮ್ಮ ಜತೆ ಯಾರೂ ಇರುವುದಿಲ್ಲ’ ಅಶ್ವತ್ಥ ನಾರಾಯಣ ಪ್ರತ್ಯುತ್ತರ ನೀಡಿದರು.

ಸಚಿವರ ಉತ್ತರ ವಿರೋಧಿಸಿ ಸಭಾಪತಿಯವರ ಪೀಠದ ಎದುರು ಧಾವಿಸಿದ ಮರಿತಿಬ್ಬೇಗೌಡ ಧರಣಿ ಆರಂಭಿಸಿದರು. ಕಾಂಗ್ರೆಸ್‌ನ ಹಲವು ಸದಸ್ಯರು ಧರಣಿಯಲ್ಲಿ ಭಾಗವಹಿಸಿದರು. ಬಳಿಕ ಕಲಾಪ ಮುಂದೂಡಿದ ಸಭಾಪತಿ ಬಸವರಾಜ ಹೊರಟ್ಟಿ, ತಮ್ಮ ಕಚೇರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪ್ರಮುಖ ನಾಯಕರ ಸಭೆ ನಡೆಸಿದರು.

ನಂತರ ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆಯೇ ಮಾತನಾಡಿದ ಅಶ್ವತ್ಥ ನಾರಾಯಣ, ‘ಸದಸ್ಯರ ಉಪಸ್ಥಿತಿಯಲ್ಲೇ ಅಧಿಕಾರಿಗಳ ಸಭೆ ನಡೆಸಿ ಸಾಧಕ–ಬಾಧಕಗಳನ್ನು ಚರ್ಚಿಸಿ, ಸಮಸ್ಯೆಗೆ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ಬಳಿಕ ಮರಿತಿಬ್ಬೇಗೌಡ ಮತ್ತು ಕಾಂಗ್ರೆಸ್‌ ಸದಸ್ಯರು ಧರಣಿ ಅಂತ್ಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.