ADVERTISEMENT

ಪತ್ರ ಎಸೆದ ಮರಿತಿಬ್ಬೇಗೌಡ: ವಿಧಾನ ಪರಿಷತ್‌ನಲ್ಲಿ ಕೋಲಾಹಲ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 8:28 IST
Last Updated 4 ಫೆಬ್ರುವರಿ 2021, 8:28 IST
ವಿಧಾನ ಪರಿಷತ್‌ನಲ್ಲಿ ಮರಿತಿಬ್ಬೇಗೌಡ
ವಿಧಾನ ಪರಿಷತ್‌ನಲ್ಲಿ ಮರಿತಿಬ್ಬೇಗೌಡ   

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಗುರುವಾರ ಪ್ರಶ್ನೋತ್ತರ ಕಲಾಪದ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಉತ್ತರದಿಂದ ಸಿಟ್ಟಿಗೆದ್ದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪತ್ರವೊಂದನ್ನು ಸಭಾಧ್ಯಕ್ಷರ ಪೀಠದ ಎದುರಿನ ಸ್ಥಳಕ್ಕೆ ಎಸೆದಿದ್ದು, ಕೋಲಾಹಲಕ್ಕೆ ಕಾರಣವಾಗಿದೆ.

ಮರಿತಿಬ್ಬೇಗೌಡ ಅವರನ್ನು ಅಮಾನತು ಮಾಡುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದಿದ್ದು, ಪೀಠದಲ್ಲಿದ್ದ ಉಪ‌ ಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಹತ್ತು ನಿಮಿಷಗಳ ಕಾಲ ಕಲಾಪ ಮುಂದೂಡಿದರು.

ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನೀರಾವರಿ ನಿಗಮದಿಂದ ಕೈಗೊಂಡಿರುವ ಕಾಮಗಾರಿಗಳ ಕುರಿತು ಮರಿತಿಬ್ಬೇಗೌಡ ಪ್ರಶ್ನೆ ಕೇಳಿದರು. ಜಲ‌ ಸಂಪನ್ಮೂಲ ಸಚಿವರ ಪರವಾಗಿ ಬೊಮ್ಮಾಯಿ ಉತ್ತರಿಸಿದರು.

ADVERTISEMENT

ಮದ್ದೂರು ತಾಲ್ಲೂಕಿನ ಕಾಮಗಾರಿಗಳಿಗೆ ಮಾತ್ರ ಒಪ್ಪಿಗೆ ನೀಡಿರುವುದಕ್ಕೆ ಮರಿತಿಬ್ಬೇಗೌಡ ಆಕ್ಷೇಪಿಸಿದರು. 'ಲಂಚ ಕೊಟ್ಟರೆ ಮಾತ್ರ ಅನುಮೋದನೆ ನೀಡಲಾಗುತ್ತದೆ' ಎಂದು ಆರೋಪಿಸಿದರು. ಈ ಆರೋಪಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರು.

ಮಳವಳ್ಳಿ ತಾಲ್ಲೂಕಿನ ₹ 85 ಲಕ್ಷದ ಕಾಮಗಾರಿ ತಡೆ ಹಿಡಿದಿರುವ ಬಗ್ಗೆ ಮರಿತಿಬ್ಬೇಗೌಡ ಪ್ರಸ್ತಾಪಿಸಿದರು. ಚರ್ಚೆ ಮುಗಿಸುವಂತೆ ಮನವಿ ಮಾಡಿದ ಬೊಮ್ಮಾಯಿ, '₹ 85 ಲಕ್ಷದ ಕಾಮಗಾರಿ ಮಾಡಿಸಬೇಕಾ? ಬೇಡವಾ ' ಎಂದು ಪ್ರಶ್ನಿಸಿದರು.

ಸಿಟ್ಟಿಗೆದ್ದು ತಮ್ಮ ಪತ್ರವನ್ನು ಸಭಾಧ್ಯಕ್ಷರ ಪೀಠದ ಎದುರು ಪರಿಷತ್ ಸಚಿವಾಲಯದ ನಡವಳಿ ದಾಖಲಿಸುವ ಅಧಿಕಾರಿಗಳು ಕುಳಿತ ಸ್ಥಳಕ್ಕೆ ಎಸೆದ ಮರಿತಿಬ್ಬೇಗೌಡ, ಬೊಮ್ಮಾಯಿ ವಿರುದ್ಧ ವಾಗ್ದಾಳಿಗೆ ಇಳಿದರು.‌ ಕೆಲಕಾಲ ತೀವ್ರ ವಾಕ್ಸಮರ ನಡೆಯಿತು.

ಮರಿತಿಬ್ಬೇಗೌಡ ಅವರನ್ನು ಅಮಾನತು ಮಾಡುವಂತೆ ಬಿಜೆಪಿಯ ಆಯನೂರು ಮಂಜುನಾಥ್ ಅವರು ಪೀಠವನ್ನು ಆಗ್ರಹಿಸಿದರು. ಸಚಿವರಾದ ಬೊಮ್ಮಾಯಿ, ಮಾಧುಸ್ವಾಮಿ ಸೇರಿದಂತೆ ಹಲವರು ಮರಿತಿಬ್ಬೇಗೌಡ ಅವರ ಅಮಾನತಿಗೆ ಪಟ್ಟು ಹಿಡಿದಿದ್ದಾರೆ.

'ಅವರು ವರದಿ ಕೊಡುವಾಗ ಯಾರಿಗೂ ವಿನಾಯಿತಿ ನೀಡಿಲ್ಲ. ಈ ರೀತಿಯ ವರ್ತನೆ ಸಹಿಸಲು ಸಾಧ್ಯವಿಲ್ಲ. ಅಮಾನತು ಮಾಡಲೇಬೇಕು' ಎಂದು ಮಾಧುಸ್ವಾಮಿ ಆಗ್ರಹಿಸಿದರು.

ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಉಪ ಸಭಾಪತಿ ಸದನದ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.