ADVERTISEMENT

ಮದುವೆ ಮನೆಗಳಲ್ಲಿ ಮಾರ್ಷಲ್‌ಗಳಿಂದ ಆರೋಗ್ಯ ಪಾಠ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 21:26 IST
Last Updated 24 ಫೆಬ್ರುವರಿ 2021, 21:26 IST
ಬಾಣಸವಾಡಿ ಮುಖ್ಯರಸ್ತೆಯ ಬಳಿಯ ರೇಣುಕಾ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಮದುವೆ ಸಮಾರಂಭಕ್ಕೆ ಭೇಟಿ ನೀಡಿದ ಮಾರ್ಷಲ್‌ಗಳು ಕೋವಿಡ್‌ ನಿಯಂತ್ರಣಕ್ಕಾಗಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದರು
ಬಾಣಸವಾಡಿ ಮುಖ್ಯರಸ್ತೆಯ ಬಳಿಯ ರೇಣುಕಾ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಮದುವೆ ಸಮಾರಂಭಕ್ಕೆ ಭೇಟಿ ನೀಡಿದ ಮಾರ್ಷಲ್‌ಗಳು ಕೋವಿಡ್‌ ನಿಯಂತ್ರಣಕ್ಕಾಗಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದರು   

ಬೆಂಗಳೂರು: ನಗರದಲ್ಲಿ ಹಮ್ಮಿಕೊಳ್ಳುವ ಮದುವೆ ಮತ್ತಿತರ ಸಮಾರಂಭಗಳಲ್ಲಿ ಕೋವಿಡ್‌ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವ ಕಾರ್ಯವನ್ನು ಬಿಬಿಎಂಪಿ ನಿಯೋಜಿಸಿರುವ ಮಾರ್ಷಲ್‌ಗಳು ಬುಧವಾರದಿಂದಲೇ ಆರಂಭಿಸಿದ್ದಾರೆ.

ವಿವಿಧ ವಲಯಗಳಲ್ಲಿ ಮಾರ್ಷಲ್‌ಗಳ ಒಟ್ಟು 20 ತಂಡಗಳು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದವು.

‘ಒಟ್ಟು 66 ಮಾರ್ಷಲ್‌ಗಳು ಬುಧವಾರ ವಿವಿಧ ಸಮಾರಂಭಗಳಿಗೆ ಭೇಟಿ ನೀಡಿ ಕೋವಿಡ್‌ ನಿಯಂತ್ರಣದ ಸಲುವಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿ ಹೇಳಿದ್ದಾರೆ. ಅವರು ಭೇಟಿ ನೀಡಿದ ಬಹುತೇಕ ಎಲ್ಲ ಕಡೆ ಕೋವಿಡ್‌ ಸೋಂಕು ತಡೆಗಟ್ಟಲು ಬಿಬಿಎಂಪಿ ಸೂಚಿಸಿರುವ ನಿಯಮಗಳನ್ನು ಪಾಲನೆ ಮಾಡುತ್ತಿರುವುದು ಕಂಡು ಬಂದಿದೆ. ಎಲ್ಲೂ ಯಾರಿಗೂ ದಂಡ ವಿಧಿಸುವ ಪ್ರಮೇಯ ಎದುರಾಗಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಗುರುವಾರವೂ ನಗರದಲ್ಲಿ ನಡೆಯುವ ಎಲ್ಲ ಸಮಾರಂಭಗಳಿಗೆ ಮಾರ್ಷಲ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ’ ಎಂದರು.

‘ಸಮಾರಂಭಗಳಿಗೆ ನೂರಾರು ಮಂದಿ ಭೇಟಿ ನೀಡುತ್ತಾರೆ. ಅವರಲ್ಲಿ ಒಬ್ಬರು ಕೋವಿಡ್‌ ಸೋಂಕು ಹೊಂದಿದ್ದರೂ ಅಪಾಯಕಾರಿ. ಸರಿಯಾದ ನಿಯಂತ್ರಣ ಕ್ರಮ ಅನುಸರಿಸದೇ ಹೋದರೆ ಒಬ್ಬರಿಂದ ನೂರಾರು ಮಂದಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಸಮಾರಂಭಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಪರಸ್ಪರ ಎರಡು ಮೀಟರ್‌ ಅಂತರ ಕಾಪಾಡಬೇಕು. ಗುಂಪುಗೂಡುವುದನ್ನು ತಪ್ಪಿಸಬೇಕು’ ಎಂದು ಆಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.