ADVERTISEMENT

ನಕಲಿ ಮಾಸ್ಕ್‌: ₹15 ಲಕ್ಷ ಲಂಚದ ಆರೋಪ

ಸಿಸಿಬಿ ಅಧಿಕಾರಿಗಳ ವಿರುದ್ಧ ಮತ್ತೊಂದು ಸುಲಿಗೆ ಪ್ರಕರಣ; 70,000 ಮಾಸ್ಕ್‌ ಮಾರಾಟ

​ಪ್ರಜಾವಾಣಿ ವಾರ್ತೆ
Published 13 ಮೇ 2020, 20:15 IST
Last Updated 13 ಮೇ 2020, 20:15 IST
ಮಾಸ್ಕ್‌ನ ಪ್ರಾತಿನಿಧಿಕ ಚಿತ್ರ
ಮಾಸ್ಕ್‌ನ ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ನಕಲಿ ಮಾಸ್ಕ್‌ ತಯಾರಿಸಿ, ‘ಎನ್‌ 95’ ಎಂದು ನಂಬಿಸಿ ದುಬಾರಿ ಬೆಲೆಗೆ ಮಾರಾಟ ಮಾಡಿ ಸಿಕ್ಕಿಬಿದ್ದ ಆರೋಪಿಯನ್ನು ರಕ್ಷಣೆ ಮಾಡಲು ₹ 15 ಲಕ್ಷ ವಸೂಲು ಮಾಡಿದ್ದಾರೆನ್ನಲಾದ ಸಿಸಿಬಿ ಅಧಿಕಾರಿಗಳ ವಿರುದ್ಧ ಮತ್ತೊಂದು ಸುಲಿಗೆ ಪ್ರಕರಣ ದಾಖಲಾಗಿದೆ.

ಎಚ್‌ಆರ್‌ಬಿಆರ್‌ ಬಡಾವಣೆ ಕಲ್ಯಾಣ ನಗರದಲ್ಲಿರುವ ಗೋದಾಮಿನ ಮೇಲೆ ಮಾರ್ಚ್‌ ಕೊನೆಯ ವಾರ ದಾಳಿ ಮಾಡಿದ ಸಿಸಿಬಿ ಆರ್ಥಿಕ ಅಪರಾಧಗಳ ವಿಭಾಗದ ಎಸಿಪಿ ಪ್ರಭುಶಂಕರ್‌ ಮತ್ತು ಅವರ ತಂಡದ
ಇನ್‌ಸ್ಪೆಕ್ಟರ್‌ಗಳು ₹20 ಲಕ್ಷ ಮೌಲ್ಯದ 12,000ಕ್ಕೂ ಹೆಚ್ಚು ನಕಲಿ ಎನ್‌95 ಮಾಸ್ಕ್‌ಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ, ಕಂಪನಿ ಮಾಲೀಕರು ₹ 1.05 ಕೋಟಿ ಬೆಲೆಯ 70,000 ಮಾಸ್ಕ್‌ ಮಾರಿದ ಆರೋಪಕ್ಕೆ ಒಳಗಾಗಿದ್ದರು. ಈ ಬಗ್ಗೆ ಬಾಣಸವಾಡಿ
ಠಾಣೆಯಲ್ಲಿ (164/2020) ಪ್ರಕರಣ ದಾಖಲಾಗಿದೆ.

ಪ್ರಕರಣ ಕುರಿತು ಸಿಸಿಬಿ ಡಿಸಿಪಿ ಕುಲದೀಪ್‌ ಜೈನ್‌ ವಿಚಾರಣೆ ನಡೆಸಿ ಜಂಟಿ ಪೊಲೀಸ್‌ ಕಮಿಷನರ್‌ ಸಂದೀಪ್ ಪಾಟೀಲ ಅವರಿಗೆ ವರದಿ ಸಲ್ಲಿಸಿದ್ದರು. ಆನಂತರ ಅದು ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಅವರಿಗೆ ಸಲ್ಲಿಕೆಯಾಗಿತ್ತು.

ADVERTISEMENT

ಪ್ರಮುಖ ಆರೋಪಿ ಸ್ಥಳದಲ್ಲಿದ್ದರೂ ಬಂಧಿಸದೆ ಸಿಸಿಬಿ ಅಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ. ಈ ಲಾಭ ಮಾಡಿಕೊಡಲು ₹ 15 ಲಕ್ಷ ಹಣ ಪಡೆದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ಮಧ್ಯವರ್ತಿಯೊಬ್ಬರಿಂದ ದೂರು ಪಡೆಯಲಾಗಿದೆ.

‘ಪ್ರಭುಶಂಕರ್‌ ಮತ್ತು ಅವರ ತಂಡದ ಕೆಲ ಸದಸ್ಯರ ವಿರುದ್ಧ ಎರಡು ಸುಲಿಗೆ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಭಾಸ್ಕರ್‌ರಾವ್‌ ಖಚಿತಪಡಿಸಿದರು. ಸಿಗರೇಟ್‌ ವಿತರಕರಿಂದ ಹಣ ಸುಲಿಗೆ ಮಾಡಿದ ಪ್ರಕರಣವೂ ಇದೇ ಠಾಣೆಯಲ್ಲಿ ದಾಖ ಲಾಗಿದೆ. ಡಿಸಿಪಿ ರವಿಕುಮಾರ್‌ ಸಿಗರೇಟ್‌ ಪ್ರಕರಣದ ವಿಚಾರಣೆ ನಡೆಸಿದ್ದರು.

ಸಾಮಾನ್ಯವಾಗಿ ಎಫ್‌ಐಆರ್‌ಗಳನ್ನು ಪೊಲೀಸ್‌ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌‌ ಮಾಡಲಾಗುತ್ತದೆ. ಆದರೆ, ಇವೆರಡೂ ಪ್ರಕರಣಗಳನ್ನು ಗೋಪ್ಯವಾಗಿ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.