ADVERTISEMENT

ತಾಯಿ, ನವಜಾತ ಶಿಶುಗಳ ಸಾವಿನ ಪ್ರಮಾಣ: ತಜ್ಞರ ಮರು ನಿಯೋಜನೆಗೆ ಕೌನ್ಸೆಲಿಂಗ್‌

147 ತಾಲ್ಲೂಕು ಆಸ್ಪತ್ರೆಗಳು, 42 ಸಿಎಚ್‌ಸಿಗಳಲ್ಲಿ 24x7 ಸೇವೆಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 0:37 IST
Last Updated 11 ನವೆಂಬರ್ 2025, 0:37 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಬೆಂಗಳೂರು: ತಾಯಿ, ನವಜಾತ ಶಿಶುಗಳ ಸಾವಿನ ಪ್ರಮಾಣ ತಗ್ಗಿಸಲು ತಾಲ್ಲೂಕು ಮಟ್ಟದ 147 ಆಸ್ಪತ್ರೆಗಳು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 42 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರಸೂತಿ, ಅರಿವಳಿಕೆ ಮತ್ತು ಮಕ್ಕಳ ತಜ್ಞರನ್ನು ತರ್ಕಬದ್ಧಗೊಳಿಸಿ, ಮರು ನಿಯೋಜಿಸಲು ಕೌನ್ಸೆಲಿಂಗ್‌ ನಡೆಯಲಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು, ‘ಕೌನ್ಸೆಲಿಂಗ್ ಮೂಲಕ ಮರುನಿಯೋಜಿಸುವ ಕುರಿತು ದೇಶವನ್ನು ಹೊರಡಿಸಲಾಗಿದೆ. ಈ ವಿಚಾರವಾಗಿ ವೈದ್ಯರ ಜತೆ ಮಾತುಕತೆ ನಡೆಸಿದ್ದು, ಬಹುತೇಕ ವೈದ್ಯರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಹೇಳಿದರು.

ಈ ಕ್ರಮದಿಂದಾಗಿ, ತಾಲ್ಲೂಕುಮಟ್ಟದ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆ ತಜ್ಞರ ಸೇವೆ ಸಿಗಲಿದೆ. ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಸಾವನ್ನು ತಪ್ಪಿಸಬಹುದು ಎಂದರು.

ADVERTISEMENT

ಪ್ರಸೂತಿ, ಅರಿವಳಿಕೆ ಮತ್ತು ಮಕ್ಕಳ ತಜ್ಞರು (ತ್ರಿವಳಿ ತಜ್ಞರು) ತಾಲ್ಲೂಕು ಆಸ್ಪತ್ರೆಗಳಲ್ಲಿ 24 ಗಂಟೆಯೂ ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇದ್ದಕ್ಕಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ತಜ್ಞರ ಸಂಖ್ಯೆ ಹೆಚ್ಚಿಸುವುದರ ಜತೆಗೆ, ಯಾವುದೇ ಆಸ್ಪತ್ರೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ತಜ್ಞರಿದ್ದರೆ, ತಜ್ಞರ ಸಂಖ್ಯೆ ಕೊರತೆ ಇರುವ ಕಡೆಗೆ ನಿಯೋಜಿಸಲಾಗುವುದು. ತಜ್ಞ ವೈದ್ಯರು ಇಲ್ಲದ ಕಾರಣಕ್ಕೆ ಯಾವ ತಾಯಿಯೂ ಮೃತಪಡಬಾರದು ಎಂಬುದು ಸರ್ಕಾರದ ಆದ್ಯತೆ ಎಂದು ಅವರು ತಿಳಿಸಿದರು.

ಕಡಿಮೆ ಕಾರ್ಯಕ್ಷಮತೆ ಹೊಂದಿರುವ 200 ಸಮುದಾಯ ಆರೋಗ್ಯ ಕೇಂದ್ರಗಳ ತಜ್ಞರನ್ನು ಹೆಚ್ಚಿನ ಕೆಲಸದ ಆಸ್ಪತ್ರೆಗಳಿಗೆ ಮರು ನಿಯೋಜಿಸಲಾಗುವುದು. ಆರೋಗ್ಯ ವಿಸ್ತರಣಾ ಕೇಂದ್ರ ಮತ್ತು ಎನ್‌ಎಚ್‌ಎಂ ಕಾರ್ಯಕ್ರಮಗಳಾದ ಎನ್‌ಸಿಡಿ ಮತ್ತು ಎನ್‌ಟಿಇಪಿ ಯಲ್ಲಿರುವ ಹುದ್ದೆಗಳಿಂದ 404 ವೈದ್ಯಕೀಯ ಅಧಿಕಾರಿಗಳನ್ನು ಮರುನಿಯೋಜಿಸಲಾಗುವುದು. ಸಮಗ್ರ ತುರ್ತು ಪ್ರಸೂತಿ ಮತ್ತು ನವಜಾತ ಶಿಶು ಆರೈಕೆ ಕೇಂದ್ರಗಳನ್ನು ಬಲಪಡಿಸಲು ಕಳಪೆ ಕಾರ್ಯಕ್ಷಮತೆ ಹೊಂದಿರುವ 24x7 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಶುಶ್ರೂಷಕರನ್ನು ಸ್ಥಳಾಂತರಿಸಲಾಗುವುದು ಎಂದು ಅವರು ವಿವರಿಸಿದರು.

‘ನಮ್ಮ ಪ್ರಯತ್ನಕ್ಕೆ ಹೆಚ್ಚಿನ ಬಲ ತುಂಬಲು ಹೆಚ್ಚುವರಿಯಾಗಿ 104 ರೇಡಿಯಾಲಜಿಸ್ಟ್‌ಗಳು ಮತ್ತು 23 ವೈದ್ಯರ  ಹುದ್ದೆಗಳನ್ನು ಸೃಜಿಸಲಾಗಿದೆ. 15 ಜಿಲ್ಲಾ ಆಸ್ಪತ್ರೆಗಳಿಗೆ 125 ಸೂಪರ್‌ ಸ್ಪೆಷಾಲಿಸ್ಟ್‌ಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ. ಇವರಲ್ಲಿ ಹೃದ್ರೋಗ ತಜ್ಞರು, ನರ ವಿಜ್ಞಾನಿಗಳು, ಮೂತ್ರಪಿಂಡ ತಜ್ಞರು, ಕ್ಯಾನ್ಸರ್‌ ತಜ್ಞರು, ಗ್ಯಾಸ್ಟ್ರೊ ಎಂಟರಾಲಜಿಸ್ಟ್‌ಗಳು, ಶ್ವಾಸಕೋಶ ತಜ್ಞರು, ವೃದ್ಧಾಪ್ಯ ತಜ್ಞರು ಮತ್ತು ಕ್ರಿಟಿಕಲ್‌ ಕೇರ್‌ ತಜ್ಞರೂ ಇರಲಿದ್ದಾರೆ’ ಎಂದು ದಿನೇಶ್ ಗುಂಡೂರಾವ್‌ ಹೇಳಿದರು.

ಕಾರ್ಯಕ್ಷಮತೆ ಸುಧಾರಿಸುವ ಅಂದರೆ ತಿಂಗಳಿಗೆ 30 ಕ್ಕಿಂತ ಹೆಚ್ಚು ಹೆರಿಗೆ ಮಾಡಿಸುವ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ ಮತ್ತು ಹೆಚ್ಚಿನ ತಜ್ಞರನ್ನು ನಿಯೋಜಿಸಲಾಗುತ್ತದೆ. ಕಾರ್ಯ ನಿರ್ವಹಣೆಯನ್ನು ಮೂರು ತಿಂಗಳಿಗೊಮ್ಮೆ ಪರಿಶೀಲನೆಗೊಳಪಡಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.