ಆರ್. ಅಶೋಕ
ಬೆಂಗಳೂರು: 2024ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 464 ಬಾಣಂತಿಯರ ಸಾವು ಸಂಭವಿಸಿದೆ ಎಂಬ 'ಪ್ರಜಾವಾಣಿ' ವರದಿ ಉಲ್ಲೇಖಿಸಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ರಾಜ್ಯದಲ್ಲಿ ಬಾಣಂತಿಯರ ಸಾವು ಶೇ 30ರಷ್ಟು ಇಳಿಕೆಯಾಗಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ, ರಾಜ್ಯದಲ್ಲಿ ಕಳೆದ 9 ತಿಂಗಳಲ್ಲಿ, ಅಂದರೆ ಏಪ್ರಿಲ್ 2024ರಿಂದ ಡಿಸೆಂಬರ್ 2024ರ ರವರೆಗೆ ರಾಜ್ಯದಲ್ಲಿ 464 ಬಾಣಂತಿಯರ ಸಾವಾಗಿದ್ದು, ಇದರಲ್ಲಿ ಶೇ 70ರಷ್ಟು ಸಾವುಗಳನ್ನು ತಡೆಯಬಹುದಾಗಿತ್ತು' ಎಂದು ರಾಜ್ಯ ಮಟ್ಟದ ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವಿಶ್ಲೇಷಣಾ ವರದಿ ಹೇಳಿದೆ.
ಇವುಗಳಲ್ಲಿ 10 ಪ್ರಕರಣಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದ್ದರೆ, ಶೇ 68ರಷ್ಟು ಪ್ರಕರಣಗಳಲ್ಲಿ ಬಾಣಂತಿಯರಿಗೆ ಸೋಂಕು ತಗುಲಿರುವುದೇ ಕಾರಣ ಎಂದು ಹೇಳಲಾಗಿದೆ. ಶೇ 70ರಷ್ಟು ಅಂದರೆ ಸುಮಾರು 325 ಬಾಣಂತಿಯರ ಸಾವಿಗೆ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದ್ದಾರೆ.
ತಮ್ಮ ಸರ್ಕಾರ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಮಹಿಳೆಯರು ಬಲಿಯಾಗಬೇಕು ಸ್ವಾಮಿ? ಗರ್ಭಿಣಿ ಮತ್ತು ಬಾಣಂತಿಯರ ಸುರಕ್ಷತೆಯ ಗ್ಯಾರಂಟಿ ಯಾವಾಗ ಕೊಡುತ್ತೀರಿ? ಎಂದೂ ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.