ಬೆಂಗಳೂರು: ‘ಕೈಗಾರಿಕಾ ಪ್ರದೇಶಗಳಿಗೆ ನದಿಗಳಿಂದ ನೀರು ಪೂರೈಸುವ ಕಾಮಗಾರಿ ಶೀಘ್ರ ಆರಂಭಿಸಲಾಗುವುದು. ಈ ಕೆಲಸವನ್ನು ಒಂದೂವರೆ ವರ್ಷದಲ್ಲಿ ಪೂರೈಸಬೇಕು’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಸೂಚಿಸಿದರು.
ಖನಿಜ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ಪ್ರದೇಶಗಳಲ್ಲಿ ಪರಿಶಿಷ್ಟ ಸಮುದಾಯದ ಉದ್ಯಮಿಗಳಿಗೆ ಶೇ 75ರಷ್ಟು ಸಬ್ಸಿಡಿ ದರದಲ್ಲಿ ನಿವೇಶನ ನೀಡಲಾಗುತ್ತಿದ್ದು, ಇದರ ಬಾಕಿ ₹938 ಕೋಟಿ ಇಲಾಖೆಗೆ ಬರಬೇಕಾಗಿದೆ. ಹಣಕಾಸು ಇಲಾಖೆ ಜತೆ ಚರ್ಚಿಸಿ, ಹಣ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹುಬ್ಬಳ್ಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಎನ್‌ಜಿಇಎಫ್ ಕಾರ್ಖಾನೆಯಿಂದ ರಾಜ್ಯದ ವಿದ್ಯುತ್ ನಿಗಮಗಳು ಖರೀದಿಸಿರುವ ವಿದ್ಯುತ್ ಪರಿವರ್ತಕಗಳ ಬಾಕಿ ₹8 ಕೋಟಿಯನ್ನು ತಕ್ಷಣವೇ ಪಾವತಿಸಬೇಕು. ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂಗಳು ತಲಾ ₹2 ಕೋಟಿ ಬಾಕಿ ಉಳಿಸಿಕೊಂಡಿವೆ. ಕಾರ್ಖಾನೆಯ ಪುನಶ್ಚೇತನಕ್ಕೆ ಸರ್ಕಾರ ನಿರ್ಧರಿಸಿದ್ದು, ಬಾಕಿ ವಸೂಲಾತಿಯೇ ಸಮಸ್ಯೆಯಾಗಿದೆ ಎಂದರು.
ಕಾರ್ಖಾನೆ ಅತ್ಯುತ್ಕೃಷ್ಟ ಗುಣಮಟ್ಟದ ವಿದ್ಯುತ್ ಪರಿವರ್ತಕಗಳ ತಯಾರಿಕೆಗೆ ಹೆಸರಾಗಿದೆ. ನೂತನ ಸಂಸತ್ ಭವನದಲ್ಲೂ ಇಲ್ಲಿಯ ಪರಿವರ್ತಕಗಳೇ ಇವೆ. ರೈಲ್ವೆ ಇಲಾಖೆ ಕೂಡ ಖರೀದಿಸುತ್ತದೆ. ಆಫ್ರಿಕಾದ ಉಗಾಂಡಾ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಕೈಗಾರಿಕಾ ಕಟ್ಟಡದ ಸುತ್ತ ಸುರಕ್ಷತಾ ದೃಷ್ಟಿಯಿಂದ 6-7 ಮೀಟರ್ ಜಾಗ ಬಿಡಬೇಕು ಎನ್ನುವ ನಿಯಮವನ್ನು ಸಡಿಲಿಸುವ ಚಿಂತನೆ ಇದೆ.ಎಂ.ಬಿ.ಪಾಟೀಲ, ಕೈಗಾರಿಕಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.