ADVERTISEMENT

ಕೇಂದ್ರ ಸಚಿವರನ್ನು ಭೇಟಿ ಮಾಡಿದ ಎಂ.ಬಿ. ಪಾಟೀಲ: ರಾಜ್ಯದ ಬೇಡಿಕೆಗಳ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 14:33 IST
Last Updated 10 ಸೆಪ್ಟೆಂಬರ್ 2024, 14:33 IST
<div class="paragraphs"><p>ಎಚ್.ಡಿ.ಕುಮಾರಸ್ವಾಮಿ ಅವರನ್ನು  ಭೇಟಿ ಮಾಡಿದ&nbsp;ಎಂ.ಬಿ. ಪಾಟೀಲ</p></div>

ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಎಂ.ಬಿ. ಪಾಟೀಲ

   

ನವದೆಹಲಿ: ಕರ್ನಾಟಕದ ಕೈಗಾರಿಕೆ, ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಕೇಂದ್ರ ಸರ್ಕಾರದ ಸಹಕಾರ ಕೋರಿ ಹಾಗೂ ಅಗತ್ಯ ಬಂಡವಾಳ ಹೂಡಿಕೆ ನಿರೀಕ್ಷಿಸಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರನ್ನು ಮಂಗಳವಾರ ಇಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

2025ರ ಫೆಬ್ರುವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಪಾಟೀಲ ಅವರು, ಸಚಿವರನ್ನು ಭೇಟಿ ಮಾಡಿದರು.

ADVERTISEMENT

ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಅವರು, ರಕ್ಷಣಾ ಸಾಧನಗಳ ಉತ್ಪಾದನೆ ಮತ್ತು ಅವುಗಳ ರಫ್ತಿನ ಮೇಲೆ ಇರುವ ನಿರ್ಬಂಧದ ತೆರವು, ರಕ್ಷಣಾ ಕಾರಿಡಾರ್ ಸ್ಥಾಪನೆಯ ಜರೂರು, ರಾಜ್ಯದಲ್ಲಿರುವ ಬಿಎಚ್ಇಎಲ್ ಮತ್ತು ಬಿಇಎಂಎಲ್ ತರಹದ ಉದ್ಯಮಗಳಲ್ಲಿ ಹೂಡಿಕೆ ಹೆಚ್ಚಳಕ್ಕೆ ಉತ್ತೇಜನ ಮತ್ತು ಕಾರವಾರದ ನೌಕಾ ವೈಮಾನಿಕ ನಿಲ್ದಾಣದ ರನ್-ವೇಯನ್ನು ಈಗಿರುವ 2 ಕಿ.ಮೀ.ನಿಂದ 2.7 ಕಿ.ಮೀ.ವರೆಗೆ ವಿಸ್ತರಿಸಲು ಬೇಕಾಗಿರುವ ನೆರವಿನ ಬಗ್ಗೆ ಚರ್ಚಿಸಿದರು.

ಬಳಿಕ ಕುಮಾರಸ್ವಾಮಿ ಅವರನ್ನು ಭೇಟಿಯಾದ ಪಾಟೀಲ, ಕರ್ನಾಟಕದ ಕೈಗಾರಿಕಾ ವಲಯದ ಬೆಳವಣಿಗೆಗೆ ಅಗತ್ಯವಿರುವ ನೆರವಿನ ಕುರಿತು ವಿಚಾರ ವಿನಿಮಯ ನಡೆಸಿದರು.

ಇ.ವಿ. ವಲಯದಲ್ಲಿ ನವೋದ್ಯಮಗಳಿಗೆ ₹10 ಸಾವಿರ ಕೋಟಿ ಪೂರೈಸಲು ಎದುರಾಗಿರುವ ಸವಾಲು, ಫೇಮ್-3 ಯೋಜನೆಯ ಜಾರಿಯಲ್ಲಿ ಆಗುತ್ತಿರುವ ವಿಳಂಬ, ರಕ್ಷಣಾ ತಂತ್ರಜ್ಞಾನ ಹಬ್‌ಗಳ ಸ್ಥಾಪನೆ, ಬೆಂಗಳೂರು ಗ್ರಾಮಾಂತರದಲ್ಲಿ ಇಎಂಸಿ ಕ್ಲಸ್ಟರ್ ಸ್ಥಾಪನೆಗೆ ಬಾಕಿ ಇರುವ ಅನುಮೋದನೆ ಬಗ್ಗೆ ಚರ್ಚಿಸಿದರು.

ಹಾರೋಹಳ್ಳಿ, ಕುಡುತಿನಿ ಮತ್ತು ದೇವಕತ್ತಿಕೊಪ್ಪದಲ್ಲಿ ಕೈಗಾರಿಕಾ ಯೋಜನೆಗಳಿಗೆ ಬಾಕಿ ಇರುವ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ, ಸೆಮಿಕಂಡಕ್ಟರ್ ಕಂಪನಿ ಸ್ಥಾಪನೆಯ ತುರ್ತು ಮತ್ತು ಕೇಂದ್ರವು ಇತ್ತೀಚೆಗೆ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ರೂಪಿಸಿರುವ 12 ಸ್ಮಾರ್ಟ್ ಸಿಟಿ ಯೋಜನೆಯಿಂದ ಕರ್ನಾಟಕವನ್ನು ಹೊರಗಿಟ್ಟಿರುವುದರ ಬಗ್ಗೆಯೂ ಮಾತುಕತೆ ನಡೆಸಿದರು.

ಬೇಗನೆ ಹಾಳಾಗುವಂತಹ ಪದಾರ್ಥ ಗಳನ್ನು ವಿಮಾನದ ಮೂಲಕ ಹೊರ ದೇಶಗಳಿಗೆ ಕಳುಹಿಸುತ್ತಿರುವ ಸಣ್ಣ ಪ್ರಮಾಣದ ರಫ್ತುದಾರರ ಮೇಲೆ ಹೇರಿರುವ ಜಿಎಸ್‌ಟಿಯನ್ನು ರದ್ದುಪಡಿಸಬೇಕು ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಆಮದಿನ ಮೇಲೆ ಈಗ ಇರುವ ಭಾರಿ ಆಮದು ತೆರಿಗೆ ಮತ್ತು ಸುಂಕವನ್ನು ಕಡಿಮೆ ಮಾಡಬೇಕು ಎಂದು ನಿರ್ಮಲಾ ಅವರಿಗೆ ಮನವಿ ಮಾಡಿದರು.

ಇದಕ್ಕೂ ಮುನ್ನ ಎಂ.ಬಿ. ಪಾಟೀಲ, ಸಿಂಗಪುರ ಹೈಕಮಿಷನರ್ ಸೈಮನ್ ವಾಂಗ್ ಅವರನ್ನು ಭೇಟಿಯಾಗಿ, ಫೆಬ್ರುವರಿಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು.

ದ್ವೇಷ ರಾಜಕಾರಣ: ಎಚ್‌ಡಿಕೆ ಕಿಡಿ

‘ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಸಂಘರ್ಷ ಬೇಡ. ರಾಜಕೀಯ ಮೀರಿ ಅಭಿವೃದ್ಧಿ ಪರವಾಗಿ ಕೆಲಸ ಮಾಡಲು ನಾನು ಮುಕ್ತ ಮನಸ್ಸು ಹೊಂದಿದ್ದೇನೆ. ರಾಜ್ಯದ ಒಳಿತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು’ ಎಂದು ಎಚ್‌.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.

ರಾಜ್ಯದಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಬೇಕು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಚ್‌ಎಂಟಿ ಭೂಮಿ ವಿವಾದ ಹಾಗೂ ದೇವದಾರಿ ಗಣಿಗಾರಿಕೆ ಯೋಜನೆಗಳ ಬಗ್ಗೆಯೂ ಅವರು ಎಂ.ಬಿ. ಪಾಟೀಲ ಜತೆ ಚರ್ಚೆ ನಡೆಸಿದರು. ರಾಜ್ಯ ಸರ್ಕಾರ ದ್ವೇಷದ ರಾಜಕಾರಣದಲ್ಲಿ ತೊಡಗಿದೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.