ADVERTISEMENT

ಜೆಡಿಎಸ್‌ನ ನಿಷ್ಠಾವಂತ ನಾಯಕ ಮನಗೂಳಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 3:16 IST
Last Updated 28 ಜನವರಿ 2021, 3:16 IST
   

ವಿಜಯಪುರ: ಆರು ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಎರಡು ಬಾರಿ ಜಯಗಳಿಸಿದ್ದ ಶಾಸಕ ಎಂ.ಸಿ. ಮನಗೂಳಿ, ಎರಡು ಬಾರಿಯೂ ಸಚಿವರಾಗಿದ್ದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆತ್ಮೀಯರಾಗಿದ್ದ ಅವರು 'ಜೀವ ಇರೋವರೆಗೂ ಜೆಡಿಎಸ್ ಬಿಡುವುದಿಲ್ಲ' ಎನ್ನುತ್ತಿದ್ದರು. ಪಕ್ಷದ ಜಿಲ್ಲಾಧ್ಯಕ್ಷರಾಗಿಯೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು.

1994 ಹಾಗೂ 2018 ರ ವಿಧಾನ ಸಭೆ ಚುನಾವಣೆಯಲ್ಲಿ ಜಯಗಳಿಸಿದ್ದರು. ಮೊದಲ ಬಾರಿ ಶಾಸಕರಾಗಿದ್ದಾಗ ಜೆ.ಎಚ್.ಪಟೇಲ್ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ, ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ತೋಟಗಾರಿಕೆಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ADVERTISEMENT

ಬಿಜೆಪಿ ಮಾಜಿ ಶಾಸಕ ರಮೇಶ ಭೂಸನೂರ ವಿರುದ್ದ 2018 ರ ವಿಧಾನ ಸಭೆ ಚುನಾವಣೆಯಲ್ಲಿ 9305 ಮತಗಳ ಅಂತರದಿಂದ ಜಯ ಸಾಧಿಸಿದ್ದರು.

ಗುತ್ತಿ‌ ಬಸವಣ್ಣ ಏತನೀರಾವರಿ ಯೋಜನೆ ಹರಿಕಾರ: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಾಗಿ ಎಂ.ಸಿ.‌ಮನಗೂಳಿ ಸಾಕಷ್ಟು ಶ್ರಮ ವಹಿಸಿದ್ದರು. ಅವರ ಹೋರಾಟದ ಫಲವಾಗಿ ಯೋಜನೆ ಜಾರಿಯಾಗಿತ್ತು.

ಸಿಂದಗಿ ಕ್ಷೇತ್ರಕ್ಕೆ ನೀರಾವರಿ ಯೋಜನೆ ಅನುಷ್ಠಾನ ಮಾಡಿದ ಹಿನ್ನೆಲೆಯಲ್ಲಿ ಅಭಿಮಾನಿಗಳು
ಗೋಲಗೇರಿಯಲ್ಲಿ ಮನಗೂಳಿ ಮತ್ತು ದೇವೇಗೌಡರ ಕಂಚಿನ ಪ್ರತಿಮೆ ಸ್ಥಾಪಿಸಿದ್ದಾರೆ.

ಈ ಕಂಚಿನ ಪ್ರತಿಮೆಗೆ ಕೆಲ ದುಷ್ಕರ್ಮಿಗಳು ಇತ್ತೀಚೆಗೆ ಬೆಂಕಿ ಹಚ್ಚಿ ವಿವಾದ ಸೃಷ್ಟಿಸಿದ್ದರು.

ಎಂ.ಸಿ.ಮನಗೂಳಿ ರಾಜಕೀಯ ಹಿನ್ನೆಲೆ:1975ರಲ್ಲಿ ವಿಜಯಪುರದ ಸಿಂದಗಿ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಎಂ.ಸಿ. ಮನಗೂಳಿ, ನಂತರ ಪುರಸಭೆ ಸದಸ್ಯರಾಗಿಯೂ ಕೆಲಸ ಮಾಡಿದರು.

1989ರಲ್ಲಿ ಸಮಾಜವಾದಿ ಜನತಾ ಪಕ್ಷದಿಂದ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡರು.

1994ರಲ್ಲಿ ಜನತಾದಳದ ಶಾಸಕರಾಗಿ ಆಯ್ಕೆಯಾದ ಇವರು, ಇದೇ ಅವಧಿಯಲ್ಲಿ ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ಸಚಿವ ಸ್ಥಾನ ಪಡೆದರು.

1999, 2004, 2008, 2013ರ ಚುನಾವಣೆಗಳಲ್ಲಿ ಸೋಲು ಅನುಭವಿಸಿ, 2018ರಲ್ಲಿ ಜೆಡಿಎಸ್ ಶಾಸಕರಾಗಿ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.