KEA
ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಹೋಮಿಯೋಪಥಿ ಕೋರ್ಸ್‌ನ ಮೊದಲ ಸುತ್ತಿನಲ್ಲಿ ₹12 ಲಕ್ಷಕ್ಕಿಂತ ಹೆಚ್ಚಿನ ಶುಲ್ಕದ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಛಾಯ್ಸ್-2 ಆಯ್ಕೆ ಮಾಡಿಕೊಂಡರೆ, ಅಂತಹ ಅಭ್ಯರ್ಥಿಗಳಿಗೆ ಪೂರ್ಣ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಇದುವರೆಗೂ ಛಾಯ್ಸ್-2 ದಾಖಲಿಸುವ ವೈದ್ಯಕೀಯ ಅಭ್ಯರ್ಥಿಗಳು ಪೂರ್ಣ ಶುಲ್ಕ ಕಟ್ಟಬೇಕಿತ್ತು. ಆದರೆ, ಈ ಬಾರಿ ₹12 ಲಕ್ಷಕ್ಕಿಂತ ಹೆಚ್ಚಿನ ಶುಲ್ಕದ ವೈದ್ಯಕೀಯ ಸೀಟು ಹಂಚಿಕೆಯಾಗಿದ್ದಲ್ಲಿ ₹12,00,117 ಮುಂಗಡ ಪಾವತಿಸಬೇಕು. ಪರಿಶಿಷ್ಟರು, ಪ್ರವರ್ಗ-1 ಅಭ್ಯರ್ಥಿಗಳು ₹2 ಲಕ್ಷ ಕಟ್ಟಬೇಕು. ಬಾಕಿ ಶುಲ್ಕವನ್ನು 2ನೇ ಸುತ್ತಿನ ಸೀಟು ಹಂಚಿಕೆಯ ನಂತರ ಪಾವತಿಸಬೇಕು. ಛಾಯ್ಸ್-1 ಆಯ್ಕೆ ಮಾಡಿದವರು ಆ.18ರ ಒಳಗೆ ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು, ಆ.19ರ ಒಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.
ಅಖಿಲ ಭಾರತ ಕೋಟಾ ಅಥವಾ ಇತರೆ ಯಾವುದೇ ರಾಜ್ಯಗಳ ಕೌನ್ಸೆಲಿಂಗ್‌ನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದರೆ, ಅಂತಹವರು ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸುವ ಮೊದಲೇ ಕೆಇಎ ಹಂಚಿಕೆ ಮಾಡಿದ ಸೀಟು ರದ್ದುಪಡಿಸಿಕೊಳ್ಳಬಹುದು. ಅಂಥವರ ಮುಂಗಡ ಶುಲ್ಕವನ್ನು ಸೀಟು ಹಂಚಿಕೆಯಾದ ಕಾಲೇಜುಗಳಿಗೆ ವರ್ಗಾಯಿಸಲಾಗುವುದು. ಪರಿಶಿಷ್ಟರು, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ಮರುಪಾವತಿಸಲಾಗುವುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.