ADVERTISEMENT

ವಿಜಯಪುರದ 2 ಸಾವಿರ ಮನೆಗಳಲ್ಲಿ ವೈದ್ಯಕೀಯ ತಪಾಸಣೆ: ಸಚಿವೆ ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 13:05 IST
Last Updated 13 ಏಪ್ರಿಲ್ 2020, 13:05 IST
   

ವಿಜಯಪುರ: ಆರು ಜನರಲ್ಲಿ ಕೋವಿಡ್‌–19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಸೀಲ್‌ಡೌನ್‌ ಆಗಿರುವ ಚಪ್ಪರಬಂದ್‌ ಪ್ರದೇಶದಲ್ಲಿ ಇರುವ ಎರಡು ಸಾವಿರ ಕುಟುಂಬಗಳನ್ನು ಸರ್ವೇ ಮಾಡಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಜಿಲ್ಲೆ ಉಸ್ತುವಾರಿ ಸಚಿವರಾಗಿ ನಿಯೋಜನೆಯಾದ ಬಳಿಕ ನಗರಕ್ಕೆ ಸೋಮವಾರ ಪ್ರಥಮ ಬಾರಿಗೆ ಆಗಮಿಸಿದ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಕೋವಿಡ್‌–19 ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಚಪ್ಪರಬಂದ್‌ ಪ್ರದೇಶದ ಜನರ ಆರೋಗ್ಯ ಸರ್ವೆಗೆ ಮನೆ, ಮನೆಗೆ ಬರುವ ಆಶಾ, ಅಂಗನವಾಡಿ, ಆರೋಗ್ಯ ಮತ್ತು ಪೊಲೀಸ್‌ ಇಲಾಖೆ ಸಿಬ್ಬಂದಿಗೆ ಪ್ರತಿ ಕುಟುಂಬದವರು ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು. ಅಗತ್ಯವಿರುವವರ ಗಂಟಲುದ್ರವನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗುವುದು ಎಂದರು.

ADVERTISEMENT

ವೈದ್ಯ ಸಿಬ್ಬಂದಿಗೂ ಹೋಂ ಕ್ವಾರಂಟೈನ್‌: ಕೋವಿಡ್‌ –19 ಸೋಂಕಿತರು ಚಿಕಿತ್ಸೆ ಪಡೆದುಕೊಂಡಿರುವ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಯನ್ನು ಹೋಂಕ್ವಾರಂಟೈನ್‌ಗೆ ಒಳಪಡಿಸುವ ಜೊತೆಗೆ ಅವರ ಗಂಟಲದ್ರವವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಮಹಾರಾಷ್ಟ್ರ ಸಂಪರ್ಕ: ಸೋಂಕು ದೃಢಪಟ್ಟಿರುವ ಎರಡೂ ಕುಟುಂಬಗಳ ನಡುವೆ ಯಾವುದೇ ಸಂಬಂಧವಿಲ್ಲ. ಆದರೆ, ಈಗಾಗಲೇ ಮೃತಪಟ್ಟಿರುವ ವೃದ್ಧನ ಕುಟುಂಬದವರು ಇಚಲಕರಂಜಿ, ಮಾಲಗಾಂವ್‌ಗೆ ಹೋಗಿಬಂದಿರುವುದು ಹಾಗೂ ಐದು ಪಾಸಿಟಿವ್‌ ಪತ್ತೆಯಾಗಿರುವ ಇನ್ನೊಂದು ಕುಟುಂಬದವರು ಸೊಲ್ಲಾಪುರ, ಪುಣೆಗೆ ಹೋಗಿ ಬಂದಿರುವುದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ ಎಂದು ಹೇಳಿದರು.

ಈ ಎರಡೂ ಕುಟುಂಬಗಳಿಗೆ ಸೋಂಕು ಹೇಗೆ ತಗುಲಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆಗೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದರು.

ಕಠಿಣ ಕ್ರಮದ ಎಚ್ಚರಿಕೆ: ಮಹಾರಾಷ್ಟ್ರಕ್ಕೆ ಹೋಗಿಬಂದಿರುವುದು ಹಾಗೂ ಸೋಂಕು ಇದ್ದರೂ ಜಿಲ್ಲಾಡಳಿತದ ಗಮನಕ್ಕೆ ತಾರದೇ ಮುಚ್ಚಿಡಲು ಯತ್ನಿಸಿರುವುದು ತನಿಖೆಯಿಂದ ದೃಢಪಟ್ಟರೆ ಕೋವಿಡ್‌–19 ಬಾಧಿತ ಎರಡೂ ಕುಟುಂಬದವರ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚಿಕಿತ್ಸೆಗೆ ಅವಕಾಶ: ಕ್ಯಾನ್ಸರ್‌, ಹೃದ್ರೋಗ ಸೇರಿದಂತೆ ಇನ್ನಿತರ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಹೊರ ಜಿಲ್ಲೆಗೆ ಹೋಗುವುದು ಅನಿವಾರ್ಯ ಇರುವವರು ಆಯಾ ಗ್ರಾಮದ ಟಾಸ್ಕ್‌ ಪೋರ್ಸ್‌ ಸಮಿತಿ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತಂದರೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.

ಖಾಸಗಿ ವೈದ್ಯರಿಗೆ ಮನವಿ: ಖಾಸಗಿ ವೈದ್ಯರು ತಮ್ಮ ಕ್ಲಿನಿಕ್‌ಗಳನ್ನು ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡಲು ಆದ್ಯತೆ ನೀಡುವಂತೆ ಐಎಂಎ ಮೂಲಕ ಮನವಿ ಮಾಡಲಾಗುವುದು ಎಂದರು.

ಪ್ರಸ್ತುತ ಸಂದರ್ಭದಲ್ಲಿ ಕೆಲವು ಖಾಸಗಿ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಒದಗಿಸಿದರೆ ಕಾರ್ಯನಿರ್ವಹಿಸುವುದಾಗಿ ಕೋರಿದ್ದಾರೆ. ಅಂತವರಿಗೆ ಅವಕಾಶ ನೀಡುವ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಪ್ರಯೋಗಾಲಯಕ್ಕೆ ಪ್ರಸ್ತಾವ: ನಗರದ ಬಿಎಲ್‌ಡಿಇ ಅಥವಾ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌–19 ಸೋಂಕು ಪ್ರಯೋಗಾಲಯ ಆರಂಭ ಸಂಬಂಧ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಶೀಘ್ರದಲ್ಲೇ ಪ್ರಸ್ತಾವ ಸಲ್ಲಿಸಲಿದ್ದಾರೆ ಎಂದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ದೇವಾನಂದ ಚವ್ಹಾಣ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ, ಸುನೀಲ್‌ಗೌಡ ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರವಿಶಂಕರ್‌, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದ ರೆಡ್ಡಿ ಇದ್ದರು.

ಮನೆ ಮಗಳಾಗಿ ಕೆಲಸ: ಜೊಲ್ಲೆ

ವಿಜಯಪುರ: ’ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಮಾತ್ರವಲ್ಲ, ಮನೆ ಮಗಳಂತೆ, ತಾಯಿಯಂತೆ ಅಷ್ಟೇ ಅಲ್ಲದೇ, ಸರ್ಕಾರದ ಪ್ರತಿನಿಧಿಯಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತೇನೆ‘ ಎಂದು ಸಚಿವೆ ಜೊಲ್ಲೆ ಭರವಸೆ ನೀಡಿದರು.

’ಸಾರ್ವಜನಿಕರ ಅನುಕೂಲಕ್ಕಾಗಿ ವಾರದೊಳಗೆ ಕಚೇರಿಯನ್ನು ತೆರೆದು, ಸಿಬ್ಬಂದಿಯನ್ನು ನೇಮಕ ಮಾಡುತ್ತೇನೆ‘ ಎಂದರು.

’ಜಿಲ್ಲೆಗೆ ಮೇಲಿಂದ ಮೇಲೆ ಭೇಟಿ ನೀಡುತ್ತೇನೆ. ಅಧಿಕಾರಿಗಳೊಂದಿಗೆ ಮತ್ತು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುತ್ತೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ‘ ಎಂದು ಧೈರ್ಯ ತುಂಬಿದರು.

ಧೈರ್ಯಗುಂದಬೇಡಿ: ಸಚಿವೆ ಮನವಿ

ವಿಜಯಪುರ: ’ನಗರದಲ್ಲಿ ಕೋವಿಡ್‌–19 ದೃಢಪಟ್ಟಿರುವುದರಿಂದ ಯಾರೂ ಅನಗತ್ಯವಾಗಿ ಆತಂಕಕ್ಕೆ ಒಳಗಾಗುವುದಾಗಲಿ, ಧೈರ್ಯಗುಂದುವುದಾಗಲಿ ಬೇಡ. ಜಿಲ್ಲೆಯ ಜನರೊಂದಿಗೆ ಸರ್ಕಾರ, ಜಿಲ್ಲಾಡಳಿತ ಸೇರಿದಂತೆ ನಾವಿದ್ದೇವೆ‘ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮನವಿ ಮಾಡಿದರು.

ಎಲ್ಲರೂ ಕೂಡಿಕೊಂಡು ಜಿಲ್ಲೆಯನ್ನು ಕೊರೊನಾ ಸೋಮಕು ಮುಕ್ತವಾಗಿಸೋಣ. ವೈದ್ಯರು, ಸರ್ಕಾರದ ನಿರ್ದೇಶನದಂತೆ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್‌ಗಳನ್ನು ಕಡ್ಡಾಯವಾಗಿ ತೊಡಬೇಕು. ಅನಗತ್ಯವಾಗಿ ತಿರುಗಾಡುವುದನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.