ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೂ 50 ಸೀಟುಗಳನ್ನು ಹೆಚ್ಚಿಸಲು ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 20:51 IST
Last Updated 10 ಜನವರಿ 2026, 20:51 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೂ 50 ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲು ಪ್ರಸ್ತಾವ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಸೂಚಿಸಿದೆ.

ಈ ಕುರಿತು ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ‘ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) 2025–26ನೇ ಸಾಲಿನಲ್ಲಿ ರಾಜ್ಯಕ್ಕೆ ಹೆಚ್ಚುವರಿಯಾಗಿ 450 ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡಿತ್ತು. 421 ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿಗೂ ಅನುಮೋದನೆ ಸಿಕ್ಕಿತ್ತು. ಮೂಲಸೌಕರ್ಯ ಹೊಂದಿರುವ ಕಾಲೇಜುಗಳಿಗೆ 2026–27ನೇ ಸಾಲಿನಲ್ಲಿ ವೈದ್ಯಕೀಯ ಸೀಟುಗಳ ಹೆಚ್ಚಳಕ್ಕಾಗಿ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಹಾಗೂ ಬಾಗಲಕೋಟೆ
ಯಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಎನ್‌ಎಂಸಿಗೆ ಪ್ರಸ್ತಾವ ಸಲ್ಲಿಸಲಾಗುವುದು. ಕಟ್ಟಡ ಹಾಗೂ ಆಸ್ಪತ್ರೆಯ ಕೊರತೆಯ ಕಾರಣ ಕನಕಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಪ್ರಸ್ತಾವ ಈ ವರ್ಷವೂ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ, ಮೂಲ ಸೌಕರ್ಯ ಕೊರತೆ ಕಾರಣ 3 ವರ್ಷಗಳಿಂದ ರಾಮನಗರ, ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುಮೋದನೆ ಸಿಕ್ಕಿಲ್ಲ. ಕಳೆದೆರಡು ಶೈಕ್ಷಣಿಕ ವರ್ಷಗಳಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವಕ್ಕೆ ಎನ್‌ಎಂಸಿ ಅನುಮತಿ ನಿರಾಕರಿಸಿತ್ತು. ಕನಕಪುರ ದಲ್ಲಿ ₹550 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ನಿರ್ಮಾಣ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಬಾಗಲಕೋಟೆಯಲ್ಲಿ ₹250 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಟೆಂಡರ್ ಕರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.