ADVERTISEMENT

ವೈದ್ಯಕೀಯ: ಗ್ರಾಮೀಣ ಸೇವೆ ಕಡ್ಡಾಯ ರದ್ದು- ಸಚಿವ ಸಂಪುಟ ಸಭೆ ತೀರ್ಮಾನ

ಎಂಬಿಬಿಎಸ್‌ ಮತ್ತು ವೈದ್ಯಕೀಯ ಸ್ನಾತಕೋತ್ತರ ಅಭ್ಯರ್ಥಿಗಳಿಗೆ ನಿಯಮ ಸಡಿಲಿಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2023, 16:57 IST
Last Updated 19 ಅಕ್ಟೋಬರ್ 2023, 16:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಎಂಬಿಬಿಎಸ್‌ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು ಎಂಬ ನಿಯಮವನ್ನು ರದ್ದು ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಈ ಸಂಬಂಧ ‘ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ (ತಿದ್ದುಪಡಿ) ಮಸೂದೆ –2023’ಕ್ಕೆ ಸಂಪುಟ ಒಪ್ಪಿಗೆ ನೀಡಿದ್ದು, ಇದನ್ನು ತುರ್ತಾಗಿ ಜಾರಿಗೊಳಿಸುವ ಉದ್ದೇಶದಿಂದ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದೆ. ವಿಧಾನಮಂಡಲದ ಅಧಿವೇಶನ ಡಿಸೆಂಬರ್‌ನಲ್ಲಿ ನಡೆಯಲಿದೆ. ಅದಕ್ಕೂ ಮೊದಲೇ ತಿದ್ದುಪಡಿ ಜಾರಿ ಮಾಡುವುದಕ್ಕಾಗಿ  ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಈ ಕುರಿತು ಮಾಹಿತಿ ನೀಡಿದರು.

ADVERTISEMENT

2012ರ ಕಾಯ್ದೆ ಮತ್ತು 2015ರ ನಿಯಮಗಳ ಅನ್ವಯ ಎಂಬಿಬಿಎಸ್‌ ಮತ್ತು ವೈದ್ಯಕೀಯ ಸ್ನಾತಕೋತ್ತರ ಅಭ್ಯರ್ಥಿಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿತ್ತು. ಕಾಯ್ದೆಗೆ ತಿದ್ದುಪಡಿ ತರುವುದರಿಂದ ಇನ್ನು ಮುಂದೆ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಿತಿಗೊಳಿಸಿ ಅಭ್ಯರ್ಥಿಗಳು ಸರ್ಕಾರಿ ಸೇವೆಗೆ ಹೆಸರುಗಳನ್ನು ನೋಂದಾಯಿಸಬಹುದು ಎಂದು ಅವರು ಹೇಳಿದರು.

‘2023–24ನೇ ಸಾಲಿನಲ್ಲಿ 3,251 ಎಂಬಿಬಿಎಸ್‌ ಅಭ್ಯರ್ಥಿಗಳು ಸರ್ಕಾರಿ ಸೇವೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ, ಈಗ 1,897 ಹುದ್ದೆಗಳು ಮಾತ್ರ ಖಾಲಿ ಇವೆ. ಎಲ್ಲರಿಗೂ ಅವಕಾಶ ಕಲ್ಪಿಸಬೇಕಾದರೆ 1,354 ಹೆಚ್ಚುವರಿ ಹುದ್ದೆಗಳನ್ನು ಸೃಜಿಸಬೇಕಾಗುತ್ತದೆ. ಇದರಿಂದ ₹ 101.82 ಕೋಟಿ ಹೆಚ್ಚುವರಿ ವೆಚ್ಚವಾಗುತ್ತದೆ. ಅಲ್ಲದೆ, 2023–24 ರ ಸಾಲಿನಲ್ಲಿ 3,515 ವೈದ್ಯಕೀಯ ಸ್ನಾತಕೋತ್ತರ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಆದರೆ, ಕೇವಲ 1,270 ಹುದ್ದೆಗಳು ಖಾಲಿ ಇವೆ. ಹೆಚ್ಚುವರಿಯಾಗಿ 2,245 ಹುದ್ದೆಗಳನ್ನು ಸೃಜಿಸಬೇಕಾಗುತ್ತದೆ. ಇದರಿಂದ ₹ 188.58 ಕೋಟಿ ಹೆಚ್ಚುವರಿ ವೆಚ್ಚವಾಗುತ್ತದೆ’ ಎಂದು ಪಾಟೀಲ ತೀರ್ಮಾನವನ್ನು ಸಮರ್ಥಿಸಿಕೊಂಡರು.

ಖಾಲಿ ಹುದ್ದೆಗಳ ಭರ್ತಿ: ‘ಸರ್ಕಾರದ ಈ ನಿರ್ಧಾರದಿಂದ ರಾಜ್ಯದಲ್ಲಿ ಎಲ್ಲೂ ವೈದ್ಯರ ಕೊರತೆ ಆಗುವುದಿಲ್ಲ. ಸದ್ಯಕ್ಕಂತೂ ಎಲ್ಲೂ ಕೊರತೆ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಇನ್ನು ಎರಡು ತಿಂಗಳಲ್ಲಿ ಭರ್ತಿ ಮಾಡಲಾಗುವುದು. ಎಷ್ಟು ವೈದ್ಯರು ಬೇಕೋ ಅಷ್ಟೇ ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತೇವೆ’ ಎಂದು ಪಾಟೀಲ ತಿಳಿಸಿದರು.

‘ನೋಂದಾಯಿಸಿದ ಎಲ್ಲ ಅಭ್ಯರ್ಥಿಗಳಿಗೂ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ. ಮಾನವ ಸಂಪನ್ಮೂಲ ವ್ಯರ್ಥ ಆಗಬಾರದು. ವೈದ್ಯಕೀಯ ಸ್ನಾತಕೋತ್ತರ ಮಾಡಿದವರನ್ನು ಗ್ರಾಮಾಂತರ ಪ್ರದೇಶಕ್ಕೆ ಕಳುಹಿಸಲು ಸಾಧ್ಯವೇ’ ಎಂದೂ ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.