ADVERTISEMENT

10 ಆಸ್ಪತ್ರೆಗಳಲ್ಲಿ ವೈದ್ಯಕೀಯ ಪಿ.ಜಿ. ಕೋರ್ಸ್‌

ಹೆಚ್ಚುವರಿ 72 ಸೀಟುಗಳ ಲಭ್ಯ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 20:00 IST
Last Updated 28 ಜೂನ್ 2019, 20:00 IST
   

ಬೆಂಗಳೂರು: ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ ಆರಂಭಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

‘ಡಿಪ್ಲೊಮೇಟ್‌ ಆಫ್‌ ನ್ಯಾಷನಲ್‌ ಬೋರ್ಡ್‌’ (ಡಿಎನ್‌ಬಿ) ನಿಯಮದಡಿ ಸ್ನಾತಕೋತ್ತರ ಕೋರ್ಸ್‌ ಆರಂಭಿಸಲಾಗುತ್ತಿದೆ. ಇದರಿಂದ ಹೆಚ್ಚುವರಿಯಾಗಿ 72 ಸೀಟುಗಳು ಸೃಷ್ಟಿ ಆಗುತ್ತವೆ ಎಂದು ಸಂಪುಟ ಸಭೆಯ ಬಳಿಕ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಹೊಳೇನರಸಿಪುರ, ದೊಡ್ಡಬಳ್ಳಾಪುರ, ಗಂಗಾವತಿ, ಶಿರಾ, ಬಸವಕಲ್ಯಾಣ, ಹಾವೇರಿ, ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗಳೂರು ಹಾಗೂ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

‘ನೀಟ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ₹ 30 ಸಾವಿರದಿಂದ ₹40 ಸಾವಿರ ಸ್ಟೈಫಂಡ್ ನೀಡಲಾಗುತ್ತದೆ. ಇದರಿಂದ ಸಾತ್ನಕೋತ್ತರ ವೈದ್ಯಕೀಯ ಸೀಟುಗಳು ಹೆಚ್ಚಳವಾಗುವುದರ ಜೊತೆಗೆ ನಮ್ಮ ಆಸ್ಪತ್ರೆಗಳಿಗೆ ತಜ್ಞ ವೈದ್ಯರ ಸೇವೆ ದೊರಕಿದಂತಾಗುತ್ತದೆ’ ಎಂದು ಹೇಳಿದರು.

ವಿಮಾ ಕಂತು ಪಾವತಿಸಲು ತೀರ್ಮಾನ

* ಪ್ರಧಾನ್‌ ಮಂತ್ರಿ ಫಸಲ್‌ ಭೀಮಾ ಯೋಜನೆಯಡಿ ರೈತರ ವಿಮಾ ಕಂತು ಪಾವತಿಸಲು ತೀರ್ಮಾನಿಸಲಾಗಿದೆ. ಕೆಲವು ಬೆಳೆಗಳಿಗೆ ಶೇ1.5, ಶೇ 2 ಮತ್ತು ಶೇ 5 ರಂತೆರೈತರು ಪ್ರೀಮಿಯಂ ಪಾವತಿಸಬೇಕು. ಉಳಿದ ವಿಮಾ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ 50:50 ರ ಅನುಪಾತದಲ್ಲಿ ಪಾವತಿಸಲಿವೆ. ಈ ಸಾಲಿನ ಪ್ರೀಮಿಯಂ ಪಾವತಿಗಾಗಿ ರಾಜ್ಯ ಸರ್ಕಾರ₹ 546.21 ಕೋಟಿ ಪಾವತಿಸಲಿದೆ.

* ಹೇಮಾವತಿ ಬಲದಂಡೆ ನಾಲೆ ಶಿಥಿಲವಾಗಿರುವುದರಿಂದ 0.00 ಕಿ.ಮೀ ರಿಂದ 92.104 ಕಿ.ಮೀ ವರೆಗೆ ನಾಲೆ ಆಧುನೀಕರಣ ಕಾಮಗಾರಿಗೆ₹ 422.75 ಕೋಟಿ.

* ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪಾವಗಡದಲ್ಲಿ 60 ಹಾಸಿಗೆಗಳ ಹೆರಿಗೆ ಆಸ್ಪತ್ರೆ,ದಾವಣಗೆರೆಯಲ್ಲಿ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆ, ಬಳ್ಳಾರಿಯಲ್ಲಿ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆ ಮತ್ತು ರಾಯಚೂರು ಆಸ್ಪತ್ರೆಗೆ ಹೆಚ್ಚುವರಿ ಸೌಲಭ್ಯಗಳ ಕಾಮಗಾರಿಗೆ ₹71.80 ಕೋಟಿ ಬಿಡುಗಡೆಗೆ ಒಪ್ಪಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.