ADVERTISEMENT

ವೈದ್ಯಕೀಯ ಸೀಟು: ಆಕ್ಷೇಪಣೆಗೆ ಇಂದು ಕೊನೆಯ ದಿನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 15:44 IST
Last Updated 24 ಅಕ್ಟೋಬರ್ 2025, 15:44 IST
   

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದ್ದು, ಅ.25ರ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.  

ಅಖಿಲ ಭಾರತ ಕೋಟಾದ ಮೂರನೇ ಸುತ್ತಿನಲ್ಲಿ ಸೀಟು ಪಡೆದು, ಕೆಇಎ ಮೂರನೇ ಸುತ್ತಿನಲ್ಲಿಯೂ ಸೀಟು ಪಡೆದಿರುವ ಅಭ್ಯರ್ಥಿಗಳು ಕೆಇಎ ಸೀಟು ಉಳಿಸಿಕೊಳ್ಳಲು ಆಸಕ್ತರಾಗಿದ್ದರೆ ಅ.25ರ ಮಧ್ಯಾಹ್ನ 12.30ರೊಳಗೆ ಕೆಇಎ ಕಚೇರಿಗೆ ಬಂದು ಮನವಿ ನೀಡಬೇಕು ಅಥವಾ ಅರ್ಜಿಯಲ್ಲಿ ನಮೂದಿಸಿದ್ದ ಇ-ಮೇಲ್‌ನಿಂದ keauthority-ka@nic.inಗೆ ಇ-ಮೇಲ್ ಕಳಿಸಬೇಕು. ಇಲ್ಲದಿದ್ದರೆ ಅಂತಹ ಅಭ್ಯರ್ಥಿಗಳನ್ನು ಅಂತಿಮ ಸೀಟು ಹಂಚಿಕೆಗೆ ಪರಿಗಣಿಸುವುದಿಲ್ಲ. ಪಾವತಿಸಿರುವ ವೈದ್ಯಕೀಯ ಕೋರ್ಸ್‌ ಠೇವಣಿಯನ್ನು ಹಿಂದಿರುಗಿಸುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ. 

ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಅ.27ರ ಮಧ್ಯಾಹ್ನ 12ರ ನಂತರ ಪ್ರಕಟಿಸಲಾಗುತ್ತದೆ. ಸೀಟು ಪಡೆದವರು ಅ.30ರ ಒಳಗೆ ಉಳಿದ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಿ, ಸೀಟು ಖಾತರಿ ಚೀಟಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಆಯಾ ಕಾಲೇಜಿಗೆ ತೆರಳಿ ಪ್ರವೇಶ ಪಡೆಯಬೇಕು ಎಂದು ಸೂಚಿಸಿದ್ದಾರೆ.

ADVERTISEMENT

ಈ ಸುತ್ತಿನಲ್ಲಿ ಅಂತಿಮ ಸೀಟು ಹಂಚಿಕೆಯಾದ ನಂತರ ರದ್ದತಿಗಾಗಿ ಮನವಿ ಸಲ್ಲಿಸಲು ಅವಕಾಶವಿಲ್ಲ. ಕಾಲೇಜಿಗೆ ಪ್ರವೇಶ ಪಡೆಯದ ಅಭ್ಯರ್ಥಿಗಳು ಪಾವತಿಸಿರುವ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.