ADVERTISEMENT

‘ವೈದ್ಯಕೀಯ ಸೀಟು ಬ್ಲಾಕಿಂಗ್ ದಂಧೆ ವಿರುದ್ಧ ಕಠಿಣ ಕ್ರಮ’

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 19:41 IST
Last Updated 15 ಮಾರ್ಚ್ 2021, 19:41 IST
 ಶಿಕ್ಷಣ ಸಚಿವ ಡಾ. ಸುಧಾಕರ್
ಶಿಕ್ಷಣ ಸಚಿವ ಡಾ. ಸುಧಾಕರ್   

ಬೆಂಗಳೂರು: ‘ವೈದ್ಯಕೀಯ ಕಾಲೇಜುಗಳಲ್ಲಿನ ಸೀಟ್ ಬ್ಲಾಕಿಂಗ್ ದಂಧೆ ತಡೆಯಬೇಕು ಮುಂದಿನ ವರ್ಷದಿಂದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಭರವಸೆ ನೀಡಿದರು.

ವಿಧಾನಪರಿಷತ್‍ನಲ್ಲಿ ಬಿಜೆಪಿಯ ಎನ್‌. ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾನೂನಿನಲ್ಲಿರುವ ಲೋಪಗಳನ್ನು ಬಳಸಿಕೊಂಡು ಸೀಟ್ ಬ್ಲಾಕಿಂಗ್ ವ್ಯವಹಾರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ರಾಜ್ಯದಲ್ಲಿರುವ 65 ವೈದ್ಯಕೀಯ ಕಾಲೇಜುಗಳ ಪೈಕಿ 45 ಕಾಲೇಜುಗಳು ಖಾಸಗಿಯವರ ಒಡೆತನದಲ್ಲಿವೆ. ಈ ಕಾಲೇಜುಗಳು ಸುಪ್ರೀಂ ಕೋರ್ಟ್‌ ಆದೇಶವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ’ ಎಂದರು.

‘ವೈದ್ಯಕೀಯ ಸೀಟ್ ಬ್ಲಾಕಿಂಗ್ ದಂಧೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕಾಲೇಜು ಆಡಳಿತ ಮಂಡಳಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಶುಲ್ಕ ಕಟ್ಟಿಸಿ ಪ್ರವೇಶ ಪರೀಕ್ಷೆ ಬರೆಸುತ್ತಿದೆ. ಆಯ್ಕೆ ಆದ ಬಳಿಕ ಅವರಿಗೆ ಸ್ವಲ್ಪ ಹಣ ಕೊಟ್ಟು ಸೀಟು ಬಿಟ್ಟು ಕೊಡುವಂತೆ ಮಾಡುತ್ತಾರೆ. ಈ ರೀತಿ ತೆರವಾದ ಸೀಟುಗಳನ್ನು ಆಡಳಿತ ಮಂಡಳಿ ಕೋಟಾದಡಿ ತುಂಬಿಸಿಕೊಳ್ಳಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಾರೆ. ಪ್ರತಿ ವರ್ಷ 250ರಿಂದ 400 ಸೀಟುಗಳ ದಂಧೆ ನಡೆಯುತ್ತಿದೆ. ಅವ್ಯವಹಾರ ತಡೆಯಲು ಕ್ರಮ ಕೈಗೊಳ್ಳಬೇಕು. ಇಂಥ ಕಾಲೇಜುಗಳಿಗೆ ನೋಟಿಸ್ ನೀಡಿ, ಮಾನ್ಯತೆಯನ್ನು ರದ್ದು ಮಾಡಬೇಕು’ ಎಂದೂ ಆಗ್ರಹಿಸಿದರು.

ADVERTISEMENT

‘ಸೀಟ್ ಬ್ಲಾಕಿಂಗ್ ಸಂಬಂಧಪಟ್ಟಂತೆ ಯಾವುದೇ ಕಾಲೇಜಿಗೆ ನೋಟಿಸ್ ನೀಡಿಲ್ಲ. ಮಾನ್ಯತೆ ಕೂಡ ರದ್ದು ಮಾಡಿಲ್ಲ. ಯಾವುದೇ ಕಾಲೇಜು ವಿರುದ್ಧ ದೂರು ದಾಖಲಾಗಿಲ್ಲ. ಆದರೆ, ಈ ದಂಧೆಯ ಬಗ್ಗೆ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಎಸಿಬಿ ಸರ್ಕಾರದ ಪೂರ್ವಾನುಮತಿ ಕೇಳಿದೆ’ ಎಂದು ಸಚಿವರು ವಿವರಿಸಿದರು.

‘ಇಂಥ ಕೆಲವು ಕಾಲೇಜುಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಕಪ್ಪು ಹಣ ಪತ್ತೆಯಾಗಿದ್ದರೆ ಅದಕ್ಕೆ ಅವರೇ ನೋಟಿಸ್ ಕೊಟ್ಟು ವಿಚಾರಣೆ ಮಾಡುತ್ತಾರೆ. ಕಪ್ಪು ಹಣದ ವಿಚಾರಣೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.