ADVERTISEMENT

ವೈದ್ಯಕೀಯ ಆಮ್ಲಜನಕ: ಸದಾ ಸನ್ನದ್ಧ ಸ್ಥಿತಿಯಲ್ಲಿರಿಸಿ

‘ರಾಷ್ಟ್ರೀಯ ಆಮ್ಲಜನಕ ಗ್ರಿಡ್‌ ನೀಲನಕ್ಷೆ’ ವರದಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 21:42 IST
Last Updated 19 ಅಕ್ಟೋಬರ್ 2022, 21:42 IST
ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಅವರು ‘ರಾಷ್ಟ್ರೀಯ ಆಮ್ಲಜನಕ ಗ್ರಿಡ್‌ ನೀಲನಕ್ಷೆ’ ವರದಿ ಬಿಡುಗಡೆ ಮಾಡಿದರು.
ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಅವರು ‘ರಾಷ್ಟ್ರೀಯ ಆಮ್ಲಜನಕ ಗ್ರಿಡ್‌ ನೀಲನಕ್ಷೆ’ ವರದಿ ಬಿಡುಗಡೆ ಮಾಡಿದರು.   

ಬೆಂಗಳೂರು: ದೇಶದಲ್ಲಿನ ಆಮ್ಲಜನಕ ವ್ಯವಸ್ಥೆ ಕುರಿತು ಅಧ್ಯಯನ ನಡೆಸಿ ಸಿದ್ಧಪಡಿಸಿರುವ ‘ರಾಷ್ಟ್ರೀಯ ಆಮ್ಲಜನಕ ಗ್ರಿಡ್‌ ನೀಲನಕ್ಷೆ’ ವರದಿಯನ್ನು ಬುಧವಾರ ನಗರದಲ್ಲಿ ಬಿಡುಗಡೆ ಮಾಡಿದೆ.

‘ಯುಎಸ್‌ಎಐಡಿ ರೈಸ್‌’, ಸ್ವಸ್ಥ ಅಲಯನ್ಸ್‌ ಮತ್ತು ಬಿಲ್‌ ಆ್ಯಂಡ್‌ ಮೆಲಿಂದಾ ಗೇಟ್ಸ್‌ ಫೌಂಡೇಷನ್‌ ನೆರವಿನೊಂದಿಗೆ ಒನ್‌ ಹೆಲ್ತ್‌ ಟ್ರಸ್ಟ್‌ (ಒಎಚ್‌ಟಿ) ಈ ವರದಿ ಸಿದ್ಧಪಡಿಸಿದೆ.

ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಅವರು ಈ ವರದಿ ಬಿಡುಗಡೆ ಮಾಡಿದರು. ಕೋವಿಡ್‌ ಪೂರ್ವ ಮತ್ತು ನಂತರದ ಪರಿಸ್ಥಿತಿ ಹಾಗೂ ಭವಿಷ್ಯದಲ್ಲಿ ವೈದ್ಯಕೀಯ ಆಮ್ಲಜನಕ ಅಗತ್ಯತೆಯ ಬಗ್ಗೆ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ADVERTISEMENT

ಸಕಾಲಕ್ಕೆ ವೈದ್ಯಕೀಯ ಆಮ್ಲಜನಕ ತಲುಪಿಸುವ ಮೂಲಕ ಅತ್ಯಮೂಲ್ಯ ಜೀವಗಳನ್ನು ಉಳಿಸಬೇಕು. ಉಸಿರಾಟದ ತೊಂದರೆ ಸೇರಿ ವಿವಿಧ ಕಾಯಿಲೆಗಳಿಗೆ ತುತ್ತಾಗಿರುವವರಿಗೆ ಅಗತ್ಯ ವೈದ್ಯಕೀಯ ಆಮ್ಲಜನಕ ಪೂರೈಕೆಯ ಅನಿವಾರ್ಯ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯವಾಗಿ, ವೈದ್ಯಕೀಯ ಆಮ್ಲಜನಕವನ್ನು ಮಹಾನಗರಗಳನ್ನು ಹೊರತುಪಡಿಸಿ ಇತರ ಪಟ್ಟಣ ಮತ್ತು ನಗರಗಳಲ್ಲಿ ಸಮರ್ಪಕವಾಗಿ ಬಳಸುತ್ತಿಲ್ಲ. ಪೂರೈಕೆಯಲ್ಲೂ ವ್ಯತ್ಯಯವಾಗುತ್ತಿದೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಆಮ್ಲಜನಕ ಬಳಕೆ ಕುರಿತು ತರಬೇತಿ ಕೊರತೆ ಇದೆ. ಹೀಗಾಗಿ, ದೇಶದ ಪ್ರತಿಯೊಂದು ಸ್ಥಳಕ್ಕೂ ಆಮ್ಲಜನಕವು ಸಮರ್ಪಕವಾಗಿ ಮತ್ತು ಸಕಾಲಕ್ಕೆ ಲಭ್ಯವಾಗುವ ವ್ಯವಸ್ಥೆಯಾಗಬೇಕು. ಇದರಿಂದ, ಭವಿಷ್ಯದಲ್ಲಿ ಯಾವುದೇ ರೀತಿಯ ಬಿಕ್ಕಟ್ಟು ಎದುರಿಸಲು ಸನ್ನದ್ಧವಾಗಿರಬೇಕು ಎಂದು ಸಲಹೆ ನೀಡಲಾಗಿದೆ.

ಆಮ್ಲಜನಕದ ಬೇಡಿಕೆಯ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳುವ ವ್ಯವಸ್ಥೆ ರೂಪಿಸಬೇಕು. ಬೇಡಿಕೆಗೆ ತಕ್ಕಂತೆ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ವಿತರಣೆ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಬೇಕು ಎಂದು ತಿಳಿಸಿದೆ.

ಕೋವಿಡ್‌–19ಗೂ ಮೊದಲು ಆಮ್ಲಜನಕ ಉತ್ಪಾದನೆಯು ಮುಖ್ಯವಾಗಿ ಉದ್ಯಮಗಳ ಬೇಡಿಕೆಯನ್ನು ಅವಲಂಬಿಸಿತ್ತು. ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯ ಬಳಿಕ ಸರ್ಕಾರವು ಆಸ್ಪತ್ರೆಗಳಲ್ಲಿ ಪಿಎಸ್‌ಎ ಘಟಕಗಳನ್ನು ಸ್ಥಾಪಿಸಿತು.ದೇಶದಲ್ಲಿ ಕೋವಿಡ್‌ ಪೂರ್ವದಲ್ಲಿ ಉತ್ಪಾದನೆಯಾಗುತ್ತಿದ್ದ ಶೇ 90ರಷ್ಟು ಆಮ್ಲಜನಕವನ್ನು ಕೈಗಾರಿಕೆಗಳಿಗೆ ಮೀಸಲಿರಿಸಲಾಗುತ್ತಿತ್ತು. ಉಳಿದದ್ದು ಮಾತ್ರ ವೈದ್ಯಕೀಯ ಆಮ್ಲಜನಕವಾಗಿತ್ತು ಎಂದು ವಿವರಿಸಲಾಗಿದೆ.

‘ಮಾದರಿ ಆಮ್ಲಜನಕ ಗ್ರಿಡ್‌ ಸಹ ವಿದ್ಯುತ್‌ ಗ್ರಿಡ್‌ಗಳ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು. ಈ ಮೂಲಕ ಉತ್ಪಾದನೆ, ಸಂಗ್ರಹ, ಸರಬರಾಜು ವ್ಯವಸ್ಥೆಯ ಸಮರ್ಪಕವಾಗಿ ನಡೆಯಬೇಕು. ಜತೆಗೆ ವಿವಿಧ ರೀತಿಯಲ್ಲಿ ಉತ್ಪಾದನೆ, ಸಂಗ್ರಹ ಕೈಗೊಳ್ಳಬೇಕು. ಇದರಿಂದ ಮಾತ್ರ ಯಾವುದೇ ರೀತಿಯ ಬಿಕ್ಕಟ್ಟು ಎದುರಿಸಲು ಸಾಧ್ಯ ಎಂದು ಒನ್‌ ಹೆಲ್ತ್‌ ಟ್ರಸ್ಟ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ರಮಣನ್‌ ಲಕ್ಷ್ಮಿನಾರಾಯಣ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.