ADVERTISEMENT

ಮೇಕೆದಾಟು: ಪ್ರತಿಕ್ರಿಯೆ ಕೋರಿದ ‘ಸುಪ್ರೀಂ’

ಪ್ರಾಥಮಿಕ ವರದಿಗೆ ಸಮ್ಮತಿ ನೀಡಿರುವುದು ಅಂತಿಮವಲ್ಲ: ನ್ಯಾಯಪೀಠ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 20:15 IST
Last Updated 12 ಡಿಸೆಂಬರ್ 2018, 20:15 IST
   

ನವದೆಹಲಿ: ಮೇಕೆದಾಟು ಯೋಜನೆ ಸಂಬಂಧ ವಿಸ್ತೃತ ವರದಿ (ಡಿಪಿಆರ್‌) ಸಲ್ಲಿಸುವಂತೆ ಸೂಚಿಸಿರುವ ಕೇಂದ್ರ ಜಲ ಆಯೋಗದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ನಾಲ್ಕು ವಾರಗಳಲ್ಲಿ ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳಿಗೆ ಅದು ನೋಟಿಸ್‌ ಜಾರಿ ಮಾಡಿತು.

ಯೋಜನೆಯನ್ನು ವಿರೋಧಿಸಿ ತಮಿಳುನಾಡು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ನೇತೃತ್ವದ ಪೀಠ ಬುಧವಾರ ನಡೆಸಿತು.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಪೂರ್ಣ ಪ್ರಮಾಣದ, ಸ್ವತಂತ್ರ ಅಧ್ಯಕ್ಷರನ್ನು ನೇಮಿಸುವಂತೆ ಕೋರಿ ತಮಿಳುನಾಡು ಸಲ್ಲಿಸಿರುವ ಮತ್ತೊಂದು ಮೇಲ್ಮನವಿಯ ಕುರಿತೂ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಪೀಠವು ಉಭಯ ಸರ್ಕಾರಗಳಿಗೆ ನಿರ್ದೇಶನ ನೀಡಿತು.

ADVERTISEMENT

ಕೇಂದ್ರ ಜಲ ಆಯೋಗವು ಕೇವಲ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ಕೇಳಿದೆ. ಪ್ರಾಥಮಿಕ ವರದಿಗೆ ಸಮ್ಮತಿ ನೀಡಿರುವುದು ಅಂತಿಮವಲ್ಲ. ಸದ್ಯ ಯೋಜನೆ ವಿರೋಧಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ ಪೀಠ, ತಮಿಳುನಾಡು ಸಲ್ಲಿಸಿರುವ ನ್ಯಾಯಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಮುಂದೂಡಿತು.

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಹಾನಿ ಇಲ್ಲ ಎಂದು ಕರ್ನಾಟಕದ ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ ಹೇಳಿದರು.

‘ಈ ಯೋಜನೆ ಆರಂಭಿಸುವುದರಿಂದ, ನದಿ ನೀರು ಹಂಚಿಕೆ ಮಾಡಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಉಲ್ಲಂಘನೆಯಾ
ಗಲಿದೆ’ ಎಂದು ತಮಿಳುನಾಡು ಪರ ವಕೀಲ ಶೇಖರ್‌ ನಾಫಡೆ ತಿಳಿಸಿದರು. ಆಗ ಮಧ್ಯ ಪ್ರವೇಶಿಸಿದ ಕೇಂದ್ರದ ಪರ ವಕೀಲ ವಸೀಂ ಖಾದ್ರಿ, ‘ಯೋಜನೆ ಕೈಗೆತ್ತಿಕೊಳ್ಳುವ ನಿರ್ಧಾರವು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಒಳಪಡುವುದರಿಂದ ಪ್ರತಿಕ್ರಿಯೆ ನೀಡಲು ಕಾಲಾವಕಾಶ ಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.