ADVERTISEMENT

ಮೇಕೆದಾಟು ಅಣೆಕಟ್ಟು ಯೋಜನೆ ಒಂದೇ ಹಂತದಲ್ಲಿ ಅನುಷ್ಠಾನ ಕಷ್ಟ: ಎಚ್‌.ಡಿ ದೇವೇಗೌಡ

ಎರಡು ಹಂತದ ಯೋಜನೆ ರೂಪಿಸಲು ಬೊಮ್ಮಾಯಿಗೆ ದೇವೇಗೌಡರ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 1:27 IST
Last Updated 15 ಮಾರ್ಚ್ 2022, 1:27 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಬೆಂಗಳೂರು: ‘ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ 67.16 ಟಿಎಂಸಿ ಅಡಿ ನೀರು ಸಂಗ್ರಹಿಸುವ ರಾಜ್ಯ ಸರ್ಕಾರದ ‍ಪ್ರಸ್ತಾವನೆಗೆ ಕೇಂದ್ರದಿಂದ ಅನುಮೋದನೆ ದೊರೆಯುವ ಸಾಧ್ಯತೆ ಕಡಿಮೆ ಇದೆ. ಎರಡು ಹಂತದಲ್ಲಿ ಯೋಜನೆ ಅನುಷ್ಠಾನಕ್ಕೆ ಡಿಪಿಆರ್‌(ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸುವುದು ಸೂಕ್ತ’ ಎಂದು ರಾಜ್ಯಸಭೆ ಸದಸ್ಯ ಎಚ್‌.ಡಿ. ದೇವೇಗೌಡ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಆಲಮಟ್ಟಿ ಮಾದರಿಯಲ್ಲಿ ಎತ್ತರವಾದ ಅಣೆಕಟ್ಟೆ ನಿರ್ಮಿಸಿ 47.27 ಟಿಎಂಸಿ ಅಡಿ ನೀರು ಸಂಗ್ರಹಿಸಲು ಸೀಮಿತ ಎತ್ತರದ ಗೇಟ್‌ಗಳನ್ನು ನಿರ್ಮಿಸಿಕೊಳ್ಳುವುದು ಸೂಕ್ತ. ಈ ರೀತಿಯ ಯೋಜನೆ ರೂಪಿಸಿದರೆ ಕೇಂದ್ರ ಸರ್ಕಾರದ ಅನುಮೋದನೆ ದೊರಕಲಿದೆ ಮತ್ತು ತಮಿಳುನಾಡಿನ ಆಕ್ಷೇಪ ಕೂಡ ಇರುವುದಿಲ್ಲ ಎಂದು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಬೆಂಗಳೂರಿನ ಕುಡಿಯುವ ನೀರಿಗಾಗಿ 4.75 ಟಿಎಂಸಿ ಅಡಿ ನೀರನ್ನು ಸುಪ್ರೀಂ ಕೋರ್ಟ್‌ ಹಂಚಿಕೆ ಮಾಡಿದೆ. ಆದರೆ, 67.16 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಮೇಕೆದಾಟು ಯೊಜನೆಯನ್ನು ಕರ್ನಾಟಕ ಸರ್ಕಾರ ರೂಪಿಸಿದೆ. ಕುಡಿಯುವ ನೀರಿನ ನೆಪದಲ್ಲಿ ನೀರಾವರಿ ಯೋಜನೆಗಳಿಗೆ ನೀರು ಬಳಕೆ ಮಾಡಿಕೊಳ್ಳುವ ದುರುದ್ದೇಶವನ್ನು ಹೊಂದಿದೆ’ ಎಂಬುದು ತಮಿಳುನಾಡಿನ ಪ್ರಮುಖ ಆಕ್ಷೇಪ.

ADVERTISEMENT

‘ಈಗ ಸಲ್ಲಿಕೆಯಾಗಿರುವ ಡಿಪಿಆರ್ ಪ್ರಕಾರ ಜಲಾಶಯ ನಿರ್ಮಾಣವಾದರೆ 12 ಸಾವಿರ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಮತ್ತು ವನ್ಯಜೀವಿಗಳ ತಾಣ ಮುಳುಗಡೆಯಾಗುತ್ತದೆ. ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯವೂ ಇದಕ್ಕೆ ಆಕ್ಷೇಪಣೆ ಎತ್ತಿದೆ. ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ಆಕ್ಷೇಪಣೆಗಳನ್ನು ಹಿಮ್ಮೆಟ್ಟಿಸಲು ಇರುವುದು ಒಂದೇ ಪರಿಹಾರ. ಎರಡು ಹಂತದಲ್ಲಿ ಯೋಜನೆ ಅನುಷ್ಠಾನಗೊಳಿಸುವುದು ಅನಿವಾರ್ಯ’ ಎಂದು ದೇವೇಗೌಡರು ತಮ್ಮ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ಬೆಂಗಳೂರಿಗೆ 4.75 ಟಿಎಂಸಿ ಅಡಿ ಕುಡಿಯುವ ನೀರು ತರಬೇಕೆಂದರೆ 24 ಟಿಎಂಸಿ ಅಡಿ ನೀರನ್ನು ಮೇಕೆದಾಟು ಬಳಿ ಸಂಗ್ರಹಿಸಬೇಕಾಗುತ್ತದೆ. ಅದಕ್ಕೆ ಆಕ್ಷೇಪ ಇಲ್ಲ.

‘2051ನೇ ಇಸವಿ ವೇಳೆಗೆ ಬೆಂಗಳೂರಿಗೆ ಇನ್ನಷ್ಟು ನೀರು ಬೇಕಾಗಲಿದ್ದು, 67.16 ಟಿಎಂಸಿ ಅಡಿ ನೀರು ಸಂಗ್ರಹಿಸುವ ಜಲಾಶಯ ಕಟ್ಟಲಾಗುವುದು. ಹೆಚ್ಚುವರಿಯಾಗಿ ಹರಿದು ಸಮದ್ರ ಸೇರುವ ನೀರನ್ನಷ್ಟೇ ಸಂಗ್ರಹಿಸಲಾಗುವುದು ಎಂಬ ಕರ್ನಾಟಕದ ವಾದ. ಇದಕ್ಕೆ ಮನ್ನಣೆ ಸಿಗುವ ಸಾಧ್ಯತೆ ಕಡಿಮೆ. ಏಕೆಂದರೆ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹೆಚ್ಚುವರಿ ನೀರು ಬಳಕೆ ಮಾಡುವ ಹಕ್ಕು ಯಾವುದೇ ರಾಜ್ಯಕ್ಕೂ ಇಲ್ಲ. ಕಾವೇರಿ–ಗುಂಡಾರ್ ನದಿ ಜೋಡಣೆ ಮತ್ತು ಮೆಟ್ಟೂರು ಜಲಾಶಯದಿಂದ ಸೇಡಂ ಜಿಲ್ಲೆಗೆ ನೀರು ಕೊಂಡೊಯ್ಯುವ ತಮಿಳುನಾಡಿನ ಯೋಜನೆಗಳಿಗೆ ಕರ್ನಾಟಕವೇ ಆಕ್ಷೇಪ ಸಲ್ಲಿಸಿದೆ. ಈ ಸಂದರ್ಭದಲ್ಲಿ ಹೆಚ್ಚುವರಿ ನೀರು ಬಳಕೆ ಮಾಡಿಕೊಳ್ಳುವ ನಮ್ಮ ಪ್ರಸ್ತಾವನೆಗೆ ಕಾನೂನಿನ ತೊಡಕು ಎದುರಾಗುವ ಸಾಧ್ಯತೆ ಇದೆ’ ಎಂದು ದೇವೇಗೌಡರು ವಿವರಿಸಿದ್ದಾರೆ.

‘ಆದ್ದರಿಂದ ಇರುವ ಅವಕಾಶವನ್ನೇ ಬಳಸಿಕೊಳ್ಳುವುದು ಸೂಕ್ತ. 30.65 ಟಿಎಂಸಿ ಅಡಿ ನೀರನ್ನು ವರ್ಷಕ್ಕೆ ಪಡೆದುಕೊಳ್ಳಬೇಕೆಂದರೆ 20.42 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯ ಇದ್ದರೆ ಸಾಕಾಗುತ್ತದೆ(ವರ್ಷಕ್ಕೆ ಒಂದೂವರೆ ಪಟ್ಟು ನೀರು ಜಲಾಶಯಕ್ಕೆ ಸೇರುತ್ತದೆ). ತಮಿಳುನಾಡಿಗೆ ಜೂನ್ ಮತ್ತು ಜುಲೈನಲ್ಲಿ ಹರಿಸಬೇಕಿರುವ 13 ಟಿಎಂಸಿ ಅಡಿ ನೀರು ಸಂಗ್ರಹಕ್ಕೆ, ಪರಿಸರ ರಕ್ಷಣೆಗಾಗಿ ನದಿಗೆ ಹರಿ ಬಿಡಲು 10 ಟಿಎಂಸಿ ಅಡಿ ಮತ್ತು ಆವಿಯಾಗಲಿರುವ 3.85 ಟಿಎಂಸಿ ಅಡಿ ಸೇರಿ ಒಟ್ಟು 47.27 ಟಿಎಂಸಿ ಅಡಿ ನೀರು ಸಂಗ್ರಹಕ್ಕೆ ಯೋಜನೆ ರೂಪಿಸಿದರೆ ಸಾಕು. ಇದಕ್ಕೆ ಯಾರ ಆಕ್ಷೇಪವೂ ವ್ಯಕ್ತವಾಗಲಾರದು’ ಎಂದು ಅವರು ಪ್ರತಿಪಾದಿಸಿದ್ದಾರೆ.

ಯಾವುದಕ್ಕೆ ಎಷ್ಟು ನೀರು (ಟಿಎಂಸಿ ಅಡಿಗಳಲ್ಲಿ)

ಬೆಂಗಳೂರಿನ ಕುಡಿಯುವ ನೀರಿಗೆ; 20.42

ಜೂನ್‌ ಮತ್ತು ಜುಲೈನಲ್ಲಿ ತಮಿಳುನಾಡಿಗೆ ಹರಿಸಲು; 13

ಪರಿಸರ ರಕ್ಷಣೆಗೆ ನದಿಗೆ ಹರಿಸಲು; 10

ಆವಿಯಾಗುವ ಪ್ರಮಾಣ; 3.85

ಒಟ್ಟು; 47.27

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.