ADVERTISEMENT

ಕೋವಿಡ್‌ ಹಬ್ಬಿಸಿರುವುದಕ್ಕೆ ಹೊಣೆ ಹೊರುವಿರಾ: ಡಿಕೆಶಿಗೆ ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2022, 10:22 IST
Last Updated 13 ಜನವರಿ 2022, 10:22 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಬಿಜೆಪಿಯು ತರಾಟೆಗೆ ತೆಗೆದುಕೊಂಡಿದೆ.

ಈ ವಿಚಾರವಾಗಿ ಗುರುವಾರ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕವು, ‘ಡಿಕೆಶಿಯವರೇ, ಮೇಕೆದಾಟು ವಿಚಾರಕ್ಕೆ ಸಂಬಂಧಪಟ್ಟಂತೆ ಪಾದಯಾತ್ರೆಯಿಂದ ಪ್ರಯೋಜನವಿಲ್ಲ ಎಂದು ನಿಮಗೆ ಸ್ಪಷ್ಟವಾಗಿ ಗೊತ್ತಿತ್ತು. ಆದರೂ ರಾಜ್ಯದ ಜನರ ಆರೋಗ್ಯವನ್ನು ಪಣಕ್ಕಿಟ್ಟು ಕೋವಿಡ್ ಜಾತ್ರೆ ನಡೆಸಿದಿರಿ. ಕೋವಿಡ್‌ ಹಬ್ಬಿಸಿರುವುದಕ್ಕೆ ಹೊಣೆ ಹೊರುವಿರಾ?’ ಎಂದು ಕೇಳಿದೆ.

'ಕೋವಿಡ್‌ ಜಾತ್ರೆಯ ರೂವಾರಿ ಡಿಕೆಶಿಯವರೇ, ಕೋವಿಡ್ ಜಾತ್ರೆಯಲ್ಲಿ ಭಾಗವಹಿಸಿದವರೆಷ್ಟು? ಎಷ್ಟು ಜನಕ್ಕೆ ಕೋವಿಡ್ ಟೆಸ್ಟ್ ನಡೆಸಿದ್ದೀರಿ? ಎಷ್ಟು ಜನರಲ್ಲಿ ಸೋಂಕು ತಗುಲಿದೆ ಎಂಬ ಲೆಕ್ಕ ಕೊಡಿ? ಕೋವಿಡ್ ನಿಯಮಾವಳಿ ಎಂದರೆ ನಿಮ್ಮ ಪ್ರಕಾರ ಏನು?’ ಎಂದು ಬಿಜೆಪಿ ಪ್ರಶ್ನಿಸಿದೆ.

ADVERTISEMENT

‘ಡಿಕೆಶಿ ಅವರೇ, ಇಂದು ನೀವು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದೀರಿ. ಆದರೆ, ಕೋವಿಡ್ ಪರೀಕ್ಷೆ ಇನ್ನೂ ಏಕೆ ಮಾಡಿಸಿಕೊಂಡಿಲ್ಲ? ನಿಮ್ಮ ಸುತ್ತಮುತ್ತಲಿದ್ದವರಿಗೆಲ್ಲಾ ಕೋವಿಡ್‌ ದೃಢಪಟ್ಟಿದೆ, ಕೋವಿಡ್‌ ಸೋಂಕನ್ನು ಕಡೆಗಣಿಸಿ ಜನತೆಗೆ ಯಾವ ಸಂದೇಶ ನೀಡಲು ಹೊರಟಿದ್ದೀರಿ?’ ಎಂದು ಬಿಜೆಪಿ ಟ್ವೀಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.